ಬೆಂಗಳೂರು | ಈರುಳ್ಳಿ ಮೂಟೆಯಲ್ಲಿ ಶ್ರೀಗಂಧ ತುಂಡುಗಳ ಕಳ್ಳಸಾಗಣೆ : ನಾಲ್ವರ ಬಂಧನ, 750 ಕೆ.ಜಿ. ಶ್ರೀಗಂಧ ವಶಕ್ಕೆ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ಶ್ರೀಗಂಧದ ತುಂಡುಗಳನ್ನು ಈರುಳ್ಳಿ ಚೀಲಗಳ ಕೆಳಗಿಟ್ಟು ಸರಕು ಸಾಗಾಣೆ ವಾಹನದಲ್ಲಿ ಸಾಗಿಸುತ್ತಿದ್ದ ನಾಲ್ವರನ್ನು ಬಂಧಿಸಿರುವ ಸಿದ್ದಾಪುರ ಠಾಣೆಯ ಪೊಲೀಸರು, 750 ಕೆ.ಜಿ. ಶ್ರೀಗಂಧ ತುಂಡುಗಳನ್ನು ವಶಪಡಿಸಿಕೊಂಡಿರುವುದಾಗಿ ವರದಿಯಾಗಿದೆ.
ಆಂಧ್ರ ಪ್ರದೇಶ ಮೂಲದ ಶೇಖ್ ಶಾರೂಕ್, ಶೇಖ್ ಅಬ್ದುಲ್, ಪರಮೇಶ್, ರಾಮ್ ಭೂಪಾಲ್ ಎಂಬುವರು ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಎರಡು ವಾಹನಗಳು ಹಾಗೂ 18 ಈರುಳ್ಳಿ ಮೂಟೆಗಳಲ್ಲಿ ಇಟ್ಟಿದ್ದ 750 ಕೆ.ಜಿ. ಶ್ರೀಗಂಧದ ತುಂಡುಗಳನ್ನು ಜಪ್ತಿ ಮಾಡಲಾಗಿದೆ. ಜೊತೆಗೆ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರೋಪಿಗಳು ಸಿನಿಮೀಯ ಶೈಲಿಯಲ್ಲಿ ಶ್ರೀಗಂಧದ ಮರದ ತುಂಡುಗಳನ್ನು ಚೀಲದ ಅಡಿಯಲ್ಲಿ ಹಾಕಿ ಮೇಲೆ ಈರುಳ್ಳಿ ತುಂಬಿಕೊಂಡು ಆಂಧ್ರಪ್ರದೇಶದ ಕರ್ನೂಲ್ನಿಂದ ಬೆಂಗಳೂರಿಗೆ ಸಾಗಿಸುತ್ತಿದ್ದರು. ಬೆಂಗಳೂರಿನ ಸೋಮೇಶ್ವರ ಆರ್ಚ್ ಬಳಿ ಗೂಡ್ಸ್ ವಾಹನ ಬರುತ್ತಿದ್ದಂತೆ ನಾಕಾಬಂದಿ ಹಾಕಿ ತಪಾಸಣೆ ಮಾಡುತ್ತಿದ್ದ ಸಿದ್ದಾಪುರ ಠಾಣಾ ಪೊಲೀಸರು, ವಾಹನವನ್ನು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಕೂಡಲೇ ಪೊಲೀಸರು ಶ್ರೀಗಂಧದ ತುಂಡುಗಳ ಸಮೇತ ನಾಲ್ವರನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜೊತೆಗೆ, ಮಾಲು ಸಾಗಿಸುತ್ತಿದ್ದ ಗೂಡ್ಸ್ ವಾಹನದ ಹಿಂದೆ ಬರುತ್ತಿದ್ದ ಮತ್ತೊಂದು ವಾಹನವನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದು, ಅದರಲ್ಲಿದ್ದ ಮೂವರು ಆರೋಪಿಗಳು ಮತ್ತು ಗೂಡ್ಸ್ ವಾಹನ ಚಾಲಕನನ್ನು ಬಂಧಿಸಿದ್ದು, ಒಟ್ಟಾರೆ ನಾಲ್ವರನ್ನು ವಿಚಾರಣೆಗೆ ಒಳಪಡಿಸಿರುವುದಾಗಿ ಮೂಲಗಳು ಹೇಳಿವೆ.
ಪ್ರಾಥಮಿಕ ವಿಚಾರಣಾ ಹಂತದಲ್ಲಿ ಶ್ರೀಗಂಧದ ತುಂಡುಗಳನ್ನು ಆಂಧ್ರ ಪ್ರದೇಶದ ಕರ್ನೂಲ್ ಅರಣ್ಯ ಪ್ರದೇಶದಿಂದ ಬೆಂಗಳೂರು ನಗರಕ್ಕೆ ತರಲಾಗುತ್ತಿತ್ತು ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.







