ಬೆಂಗಳೂರು: ಪೊಲೀಸರ ಸೋಗಿನಲ್ಲಿ ವಂಚಿಸುತ್ತಿದ್ದ ಆರೋಪಿಯ ಬಂಧನ

ಬೆಂಗಳೂರು, ಡಿ.9: ಪೊಲೀಸರ ಸೋಗಿನಲ್ಲಿ ಸಾರ್ವಜನಿಕರನ್ನು ಪರಿಚಯಿಸಿಕೊಂಡು, ನಗರದ ವಿವಿಧೆಡೆ ಪೊಲೀಸರು ಜಪ್ತಿ ಮಾಡಿರುವ ವಾಹನಗಳನ್ನು ಕಡಿಮೆ ಬೆಲೆಗೆ ಕೊಡಿಸುವುದಾಗಿ ಹಣ ಪಡೆದು ವಂಚಿಸುತ್ತಿದ್ದ ಆರೋಪಿಯನ್ನು ಇಲ್ಲಿನ ಬೇಗೂರು ಠಾಣಾ ಪೊಲೀಸರು ಬಂಧಿಸಿರುವುದು ವರದಿಯಾಗಿದೆ.
ಕೆ.ಲೂರ್ದನಾಥನ್ (53) ಬಂಧಿತ ಆರೋಪಿ. ಈ ಹಿಂದೆ ಗೃಹರಕ್ಷಕದಳದಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ, ಸದ್ಯ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಆದರೆ ಪೊಲೀಸ್ ಸಮವಸ್ತ್ರ ಧರಿಸಿ ತಾನೊಬ್ಬ ಪೊಲೀಸ್ ಎಂದು ಹೇಳಿಕೊಂಡು ಸಾರ್ವಜನಿಕರನ್ನು ಪರಿಚಯಿಸಿಕೊಳ್ಳುತ್ತಿದ್ದ ಆರೋಪಿ, ನಗರದ ಬೇರೆ ಬೇರೆ ಠಾಣಾ ವ್ಯಾಪ್ತಿಗಳಲ್ಲಿ ಪೊಲೀಸರು ಜಪ್ತಿ ಮಾಡಿರುವ ವಾಹನಗಳನ್ನು ಹರಾಜಿನಲ್ಲಿ ಕಡಿಮೆ ಬೆಲೆಗೆ ಕೊಡಿಸುವುದಾಗಿ ನಂಬಿಸುತ್ತಿದ್ದ. ಇದಕ್ಕೆ ಪ್ರತಿಯಾಗಿ ಅವರಿಂದ ಹಣ ಪಡೆದು, ನಂತರ ವಂಚಿಸುತ್ತಿದ್ದ.
ಬೇಗೂರು ಠಾಣಾ ವ್ಯಾಪ್ತಿಯಲ್ಲಿ ಇದೇ ರೀತಿ ವ್ಯಕ್ತಿಯೊಬ್ಬರಿಗೆ ವಂಚಿಸಿದ್ದ ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯಿಂದ 50 ಸಾವಿರ ರೂ. ನಗದು ಹಾಗೂ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯು ಇದೇ ರೀತಿ ಚಿಕ್ಕಜಾಲ, ಬೆಳ್ಳಂದೂರು ಹಾಗೂ ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯಲ್ಲಿಯೂ ವಂಚಿಸಿರುವುದು ಪೊಲೀಸರ ತನಿಖೆ ವೇಳೆ ತಿಳಿದು ಬಂದಿದೆ.





