Bengaluru | ಕನ್ನಡದ ಬಗ್ಗೆ ವಿರೋಧಗಳೇ ಹೆಚ್ಚು : ರಾಜಪ್ಪ ದಳವಾಯಿ
‘ಇಂದಿರಾ ರತ್ನ ದತ್ತಿ ಪ್ರಶಸ್ತಿ’ ಪ್ರದಾನ

ಬೆಂಗಳೂರು : ಬಿ.ಎಲ್.ರೈಸ್, ಫರ್ಡಿನೆಂಡ್ ಕಿಟ್ಟೆಲ್, ಹರ್ಮನ್ ಮೊಗ್ಲಿಂಗ್ ಸೇರಿ ಮುಂತಾದ ವಿದೇಶಿಯರಿಗೆ ಇದ್ದ ಕನ್ನಡ ಪ್ರೇಮ, ಕನ್ನಡಿಗರಲ್ಲಿ ಕಾಣುತ್ತಿಲ್ಲ. ನಾವು ಕನ್ನಡದ ಪ್ರಜ್ಞೆಯನ್ನು ಮರೆಯುತ್ತಿದ್ದೇವೆ. ನಮ್ಮ ಸುತ್ತಮುತ್ತ ಕನ್ನಡದ ಬಗ್ಗೆ ವಿರೋಧಗಳೇ ಹೆಚ್ಚಾಗಿವೆ ಎಂದು ವಿಶ್ರಾಂತ ಪ್ರಾಧ್ಯಾಪಕ ರಾಜಪ್ಪ ದಳವಾಯಿ ಬೇಸರ ವ್ಯಕ್ತಪಡಿಸಿದ್ದಾರೆ.
ಸೋಮವಾರ ನಗರದ ಶೇಷಾದ್ರಿಪುರಂ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಕರ್ನಾಟಕ ಲೇಖಕಿಯರ ಸಂಘದ ‘ಇಂದಿರಾ ರತ್ನ ದತ್ತಿ ಪ್ರಶಸ್ತಿ’ ಪ್ರದಾನ ಹಾಗೂ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕರ್ನಾಟಕದ ಶಾಸನಗಳನ್ನು ಬಿ.ಎಲ್.ರೈಸ್ ಅವರು ಅಧ್ಯಯನ ನಡೆಸಿದರು. ಕನ್ನಡ ಮಾತನಾಡುವುದನ್ನು ಕಲಿತಿದ್ದಲ್ಲದೇ, ಹಳಗನ್ನಡ ಅಧ್ಯಯನ ಮಾಡಿದ ಕಿಟ್ಟೆಲ್ ಕನ್ನಡದ ನಿಘಂಟು ರಚಿಸಿದರು. ಮೊಗ್ಲಿಂಗ್ ಅವರು ಕನ್ನಡದ ಮೊದಲ ಪತ್ರಿಕೆ ತಂದರು. ಕನ್ನಡ ಎಲ್ಲವನ್ನು ನೀಡಿದೆ ಎಂದು ಅವರು ಭಾವಿಸಿದ್ದರು. ಆದರೆ, ನಾವು ಕನ್ನಡದ ಪ್ರಜ್ಞೆಯನ್ನು ಮರೆಯುತ್ತಿದ್ದೇವೆ ಎಂದು ಹೇಳಿದರು.
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಆರ್.ಸುನಂದಮ್ಮ ಮಾತನಾಡಿ, ‘ಪುಸ್ತಕಗಳನ್ನು ಓದುವುದರಿಂದ, ನಾಟಕಗಳನ್ನು ನೋಡುವುದರಿಂದ ನಮಗೆ ಚಿಂತನೆಯ ಶಕ್ತಿ ಬರುತ್ತದೆ. ಮನಸ್ಸು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಓದು ಅಗತ್ಯ ಎಂದು ತಿಳಿಸಿದರು.
ಇದೇ ವೇಳೆ ಇಂದಿರಾ ರತ್ನ ದತ್ತಿ 2025ನೇ ಸಾಲಿನ ಪ್ರಶಸ್ತಿಯನ್ನು ಲಲಿತಮ್ಮ ಡಾ.ಚಂದ್ರಶೇಖರ್, 2026ರ ಪ್ರಶಸ್ತಿಯನ್ನು ಮೀರಾ ಶಿವಲಿಂಗಯ್ಯ ಅವರಿಗೆ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಲೇಖಕಿ ಎಂ.ಎಸ್.ಆಶಾದೇವಿ, ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಪ್ರದಾನ ಕಾರ್ಯದರ್ಶಿ ವೂಡೇ ಪಿ.ಕೃಷ್ಣ, ಶೇಷಾದ್ರಿಪುರಂ ಸ್ವತಂತ್ರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಶಾಂತ್ ಆರ್., ಲೇಖಕಿಯರ ಸಂಘದ ಪ್ರದಾನ ಕಾರ್ಯದರ್ಶಿ ಸುಮಾ ಸತೀಶ್, ಖಜಾಂಚಿ ಲಲಿತಾ ಹೊಸಪೇಟೆ ಮತ್ತಿತರರು ಉಪಸ್ಥಿತರಿದ್ದರು.
‘ಕನ್ನಡ ಸಾಹಿತ್ಯ ಮೂಲತಃ ಒಂದು ಜಾತ್ಯಾತೀತವಾದ ಸಂವೇದನೆಯನ್ನು ಒಳಗೊಂಡಿದೆ. ಶರಣ ಸಾಹಿತ್ಯವಂತೂ ಕನ್ನಡದಲ್ಲಿ ಬಹಳ ದೊಡ್ಡ ಸಮಾನತೆಯ ಆಶಯನ್ನು ತಂದುಕೊಟ್ಟಿದೆ’.
-ರಾಜಪ್ಪ ದಳವಾಯಿ, ವಿಶ್ರಾಂತ ಪ್ರಾಧ್ಯಾಪಕ






