ಬೆಂಗಳೂರು | ಬೆದರಿಕೆ ಆರೋಪ: ಬಿಬಿಎ ವಿದ್ಯಾರ್ಥಿನಿ ಆತ್ಮಹತ್ಯೆ, ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ
ಬೆಂಗಳೂರು, ಅ.19: ನಗರದ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬರು ಪಿ.ಜಿ.ಯೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಬಂಧ ಇಲ್ಲಿನ ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸನಾ ಪರ್ವಿನ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಮಗಳ ಸಾವಿಗೆ ರೀಫಾಸ್ ಎಂಬಾತ ಕಾರಣನಾಗಿದ್ದು, ಈತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆರೋಪಿಸಿ ತಂದೆ ಅಬ್ದುಲ್ ನಝೀರ್ ಎಂಬುವರು ನೀಡಿದ ದೂರನ್ನು ಆಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿದ್ದ ಸನಾ ಪರ್ವೀನ್ ಅವರು, ನಗರದ ಕಾಡುಸೊಣ್ಣಪ್ಪಹಳ್ಳಿಯ ಗ್ರೀನ್ ಗಾರ್ಡನ್ ಬಡಾವಣೆಯ ಪಿ.ಜಿ.ಯೊಂದರಲ್ಲಿ ಗೆಳತಿಯರೊಂದಿಗೆ ವಾಸವಾಗಿದ್ದರು. ಅ.17ರಂದು ಬೆಳಗ್ಗೆ ವಿದ್ಯಾರ್ಥಿನಿ ವ್ಯಾಸಂಗ ಮಾಡುತ್ತಿದ್ದ ಕಾಲೇಜಿನ ಉಪನ್ಯಾಸಕಿಯೊಬ್ಬರು ಕರೆ ಮಾಡಿ ವಿಷಯ ತಿಳಿಸಿದ್ದರು. ಕೂಡಲೇ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಪಿ.ಜಿ.ಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂತು ಎಂದು ದೂರಿನಲ್ಲಿ ಅಬ್ದುಲ್ ನಝೀರ್ ಉಲ್ಲೇಖಿಸಿದ್ದಾರೆ.
10 ತಿಂಗಳ ಹಿಂದೆ ಯುವಕನೊಬ್ಬ ತಮ್ಮ ಮಗಳನ್ನು ಹಿಂಬಾಲಿಸಿ ಬೆದರಿಕೆ ಹಾಕುತ್ತಿದ್ದ ಎಂಬುದನ್ನು ಹೇಳಿಕೊಂಡಿದ್ದಳು. ಆದರೆ, ಯಾವ ಕಾರಣಕ್ಕೆ ಎಂಬುದು ತಿಳಿದಿರಲಿಲ್ಲ. ಈ ವಿಷಯವನ್ನು ಕಾಲೇಜಿನ ಆಡಳಿತ ಮಂಡಳಿಯ ಗಮನಕ್ಕೆ ತಂದಾಗ ಆ ಯುವಕನನ್ನು ಕರೆಯಿಸಿ ತಿಳಿವಳಿಕೆ ಹೇಳಿ ಕಳುಹಿಸಿದ್ದರು. ಇತ್ತೀಚೆಗೆ ಮಗಳಿಗೆ ಮೊಬೈಲ್ನಲ್ಲಿ ಅನುಚಿತವಾಗಿ ಸಂದೇಶಗಳನ್ನು ಕಳುಹಿಸುತ್ತಿದ್ದ. ಇದಾದ ಬಳಿಕ ಮತ್ತೆ ಮಗಳಿಗೆ ತೊಂದರೆ ಕೊಡುವುದನ್ನು ಮುಂದುವರೆಸಿದ್ದ. ಆರೋಪಿ ರೀಫಾಸ್ ಎಂಬುವನ ಹಿಂಸೆ ತಾಳಲಾರದೇ ಪರ್ವಿನ್ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೂರಿನಲ್ಲಿ ಅಬ್ದುಲ್ ನಝೀರ್ ಆರೋಪಿಸಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವ ಪೊಲೀಸರು, ವಿಚಾರಣೆಗೆ ಹಾಜರಾಗಲು ಶಂಕಿತ ಆರೋಪಿಗೆ ನೋಟಿಸ್ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.







