Bengaluru | ಮನೆಗೆ ನುಗ್ಗಿ ಬೆದರಿಕೆ, ಹಣ ವಸೂಲಿ; ನಕಲಿ ಪಿಎಸ್ಐ ಸೇರಿ ನಾಲ್ವರ ಬಂಧನ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ಪೊಲೀಸ್ ಸಮವಸ್ತ್ರ ಧರಿಸಿ, ಮನೆಗೆ ನುಗ್ಗಿ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ ನಕಲಿ ಪಿಎಸ್ಐ ಸೇರಿ ನಾಲ್ವರನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ.
ಮಲ್ಲಿಕಾರ್ಜುನ, ಪ್ರಮೋದ್,ವಿನಯ್, ಹೃತ್ವಿಕ್ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳು ಸಂಚು ರೂಪಿಸಿ ಮನೆಗೆ ನುಗ್ಗಿ ಬೆದರಿಕೆ ಹಾಕಿ ಹಣ ದೋಚುತ್ತಿದ್ದರು. ಹೀಗೆಯೇ ವ್ಯಕ್ತಿಗೆ ಬೆದರಿಸಿ ಹಣ ಲೂಟಿ ಮಾಡಿದ್ದ ನಾಲ್ವರನ್ನು ಪೊಲೀಸರು ಬಂಧನ ಮಾಡಿದ್ದಾರೆ.
ಪಿಎಸ್ಐ ಆಗಬೇಕು ಎಂದು ಮಲ್ಲಿಕಾರ್ಜುನ ಎರಡು ಬಾರಿ ಪರೀಕ್ಷೆ ಬರೆದು ವಿಫಲನಾಗಿದ್ದನು, ಆದರೂ ಪರೀಕ್ಷೆ ಉತ್ತೀರ್ಣ ಮಾಡಿ ಪಿಎಸ್ಐ ಆಗಿದ್ದೇನೆ ಎಂದು ಊರಿನಲ್ಲಿ ಬಿಂಬಿಸಿಕೊಂಡಿದ್ದನು. ಪೊಲೀಸ್ ಸಮವಸ್ತ್ರ, ಲಾಠಿ, ಟೋಪಿ, ಶೂ ಧರಿಸಿ ಫೊಟೋ ಶೂಟ್ ಮಾಡಿಸಿ ಸ್ವಗ್ರಾಮ ಸಿರಗುಪ್ಪದಲ್ಲಿ ತಾನೂ ಬೆಂಗಳೂರಲ್ಲಿ ಪಿಎಸ್ಐ ಆಗಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದನು ಎನ್ನಲಾಗಿದೆ.
ಡಿ.7ರಂದು ನಾಲ್ವರು ಆರೋಪಿಗಳು ನವೀನ್ ಎಂಬುವವರ ಮನೆಗೆ ತೆರಳಿ, ‘ನೀನು ಗಾಂಜಾ ಮಾರಾಟ ಮಾಡುತ್ತಿರುವೆ, ಮನೆ ಶೋಧ ನಡೆಸಬೇಕು ಎಂದು ಬೆದರಿಕೆ ಹಾಕಿ, ನವೀನ್ ಮೇಲೆ ಲಾಠಿ, ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿದ್ದರು. ಬಂಧನ ಮಾಡಬಾರದು ಎಂದರೆ ಹಣ ಕೊಡಬೇಕು’ ಎಂದು ಖಾತೆಯಲ್ಲಿದ್ದ 87 ಸಾವಿರ ರೂ. ಬೀರುವನಲ್ಲಿದ್ದ 53 ಸಾವಿರ ರೂ. ಪರ್ಸ್ನಲ್ಲಿದ್ದ 2 ಸಾವಿರ ರೂ. ಕಸಿದು ಪರಾರಿಯಾಗಿದ್ದರು ಎಂ ಆರೋಪ ಕೇಳಿ ಬಂದಿದೆ.
ಈ ಬಗ್ಗೆ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ನವೀನ್ ಪ್ರಕರಣ ದಾಖಲಿಸಿದ್ದರು. ಕಾರ್ಯಾಚರಣೆ ನಡೆಸಿ ನಕಲಿ ಪಿಎಸ್ಐ ಸೇರಿ ನಾಲ್ವರನ್ನು ಬಂಧಿಸಿ 45 ಸಾವಿರ ಹಣ, ಕೃತ್ಯಕ್ಕೆ ಬಳಸಿದ್ದ ಕಾರು ಜಪ್ತಿ ಮಾಡಿರುವ ವಿದ್ಯಾರಣ್ಯಪುರ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.







