ಬೆಂಗಳೂರು | ಲಾರೆನ್ಸ್ ಬಿಷ್ಣೋಯ್ ಹೆಸರಿನಲ್ಲಿ ಉದ್ಯಮಿಗೆ ಬೆದರಿಕೆ : ನಾಲ್ವರ ಬಂಧನ
ʼ1 ಕೋಟಿ ರೂ.ನೀಡಿ, ಇಲ್ಲವಾದಲ್ಲಿ ಮಗನನ್ನು ಅಪಹರಿಸುತ್ತೇವೆʼ ಎಂದು ಬೆದರಿಕೆ ಹಾಕಿದ್ದ ಆರೋಪಿಗಳು

ಸಾಂದರ್ಭಿಕ ಚಿತ್ರ (PC : Meta AI)
ಬೆಂಗಳೂರು : ಉದ್ಯಮಿಗೆ ಕರೆ ಮಾಡಿ ಬೆದರಿಸಿದ್ದ ಪ್ರಕರಣದಡಿ ನಾಲ್ವರು ಆರೋಪಿಗಳನ್ನು ಇಲ್ಲಿನ ಶೇಷಾದ್ರಿಪುರಂ ಠಾಣೆ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಬೆಂಗಳೂರಿನ ಮೊಹಮ್ಮದ್ ರಫೀಕ್, ಉತ್ತರ ಪ್ರದೇಶ ಮೂಲದ ಶಿಶುಪಾಲ್ ಸಿಂಗ್, ವಂಶ್ ಸಚ್ದೇವ್ ಹಾಗೂ ಅಮಿತ್ ಚೌಧರಿ ಎಂಬುವರು ಬಂಧಿತರು ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಒಂದು ಕಾರು, ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉದ್ಯಮಿಯೊಬ್ಬರಿಗೆ ಜುಲೈ 8ರಂದು ರಾತ್ರಿ ಕರೆ ಮಾಡಿದ್ದ ಆರೋಪಿಗಳು, ಲಾರೆನ್ಸ್ ಬಿಷ್ಣೋ ಯ್ ಗ್ಯಾಂಗ್ ಸದಸ್ಯರ ಹೆಸರಿನಲ್ಲಿ ಬೆದರಿಸಿ ಒಂದು ಕೋಟಿ ರೂ. ಹಣಕ್ಕೆ ಬೇಡಿಕೆಯಿಟ್ಟಿದ್ದರು. ‘ಇಲ್ಲವಾದರೆ ನಿನ್ನ ಮಗನನ್ನು ಅಪಹರಿಸುತ್ತೇವೆ’ ಎಂದು ಬೆದರಿಸಿರುವುದಾಗಿ ಉದ್ಯಮಿಯ ಪುತ್ರ ನೀಡದ್ದ ದೂರಿನಲ್ಲಿ ಆರೋಪಿಸಲಾಗಿತ್ತು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ತನಿಖೆಗಾಗಿ ಕೇಂದ್ರ ವಿಭಾಗ ಮತ್ತು ಸಿಸಿಬಿಯ ಅಧಿಕಾರಿಗಳನ್ನೊಳಗೊಂಡ ಪ್ರತ್ಯೇಕ ತಂಡವನ್ನು ರಚಿಸಿದ್ದರು. ಅದರಂತೆ ಪ್ರಕರಣದ ತನಿಖೆ ಕೈಗೊಂಡ ತಂಡ ಜೆ.ಸಿ.ರಸ್ತೆಯಲ್ಲಿ ಕಾರ್ ಸೌಂಡ್ ಆಕ್ಸೆಸರೀಸ್ಗಳನ್ನು ವ್ಯಾಪಾರ ಮಾಡುತ್ತಿದ್ದ ಮೊಹಮ್ಮದ್ ರಫೀಕ್ನನ್ನು ಬಂಧಿಸಿದ್ದರು. ಆತ ನೀಡಿದ ಮಾಹಿತಿಯನ್ವಯ ಉತ್ತರ ಪ್ರದೇಶ ಮೂಲದ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಷ್ಣೋ ಯ್ ಗ್ಯಾಂಗ್ಗೂ ಆರೋಪಿತರಿಗೂ ಸಂಬಂಧವಿಲ್ಲ: ಪ್ರಕರಣವೊಂದರಲ್ಲಿ ದಿಲ್ಲಿ ಪೊಲೀಸರಿಂದ ಬಂಧನವಾಗಿದ್ದ ಮೊಹಮ್ಮದ್ ರಫೀಕ್, ಕೆಲಕಾಲ ತಿಹಾರ್ ಜೈಲಿನಲ್ಲಿ ಕಳೆದಿದ್ದ. ಆ ಸಂದರ್ಭದಲ್ಲಿ ಉತ್ತರ ಪ್ರದೇಶ ಮೂಲದ ಉಳಿದ ಮೂವರು ಆರೋಪಿಗಳ ಪರಿಚಯವಾಗಿತ್ತು. ಲಾರೆನ್ಸ್ ಬಿಷ್ಣೋ ಯ್ ಗ್ಯಾಂಗ್ಗೂ ಆರೋಪಿತರಿಗೂ ಯಾವುದೇ ಸಂಬಂಧವಿಲ್ಲ ಎಂದು ಶೇಷಾದ್ರಿಪುರಂ ಠಾಣೆ ಪೊಲೀಸರು ತಿಳಿಸಿದ್ದಾರೆ.







