ಮಹಾ ಮಳೆಗೆ ರಸ್ತೆಯಲ್ಲೇ ನಿಂತ ವಾಹನಗಳು: ಬೆಂಗಳೂರು ನಗರದಲ್ಲೆಡೆ ಸಂಚಾರ ದಟ್ಟಣೆ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ರಾತ್ರಿ ಭಾರೀ ಮಳೆಯಿಂದ ರಸ್ತೆಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಇದರಿಂದ ಬಹುತೇಕ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿ, ಗಂಟೆಗಟ್ಟಲೇ ವಾಹನ ಸವಾರರು ರಸ್ತೆಯಲ್ಲಿಯೇ ನಿಂತಿದ್ದ ದೃಶ್ಯಗಳು ಕಂಡವು.
ಸೋಮವಾರ ಸಂಜೆ ನೆಲಮಂಗಲದ ಕುಣಿಗಲ್ ಬೈಪಾಸ್ ಬಳಿ ಸಂಚಾರ ದಟ್ಟಣೆ ಉಂಟಾಗಿದೆ. ಕುಣಿಗಲ್‍ನಿಂದ ನೆಲಮಂಗಲ ಹಾಗೂ ತುಮಕೂರಿನಿಂದ ನೆಲಮಂಗಲ ಕಡೆ ಸೇರುವ ಜಂಕ್ಷನ್ ಒಂದೇ ಆಗಿದ್ದರಿಂದ ಭಾರೀ ಪ್ರಮಾಣದಲ್ಲಿ ಸಂಚಾರ ದಟ್ಟಣೆ ಇತ್ತು. ಎರಡು ಗಂಟೆಗೆಳ ಕಾಲ ಸಂಚಾರ ಇಲ್ಲದೆ ವಾಹನಗಳು ಸ್ಥಳದಲ್ಲಿಯೇ ನಿಂತಿದ್ದವು.
ಇನ್ನೂ ಬೆಳಗ್ಗೆಯೂ ಮಳೆಯ ನೀರು ನಿಂತಿದ್ದ ಕಾರಣ ಬೆಂಗಳೂರು ಪ್ರವೇಶಿಸುವ ದೇವನಹಳ್ಳಿ ರಸ್ತೆ, ಮೈಸೂರು ರಸ್ತೆ, ಕನಕಪುರ ರಸ್ತೆ, ಹಳೇ ಮದ್ರಾಸ್ ರಸ್ತೆ ಸೇರಿದಂತೆ ನಾನಾ ಕಡೆ ವಾಹನಗಳ ಸಂಚಾರ ಕೆಲ ನಿಂತಿದ್ದವು.
ಅದೇ ರೀತಿ, ದೊಡ್ಡಬಳ್ಳಾಪುರ-ಬೆಂಗಳೂರು ಮಾರ್ಗದಲ್ಲಿ ಕಾವೇರಿ ಭವನಕ್ಕೆ ಹೋಗುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಮೇಲೆ ಮರದ ಬೃಹತ್ ಕೊಂಬೆ ಮುರಿದು ಬಿದ್ದಿದೆ. ತಕ್ಷಣವೇ ಚಾಲಕ ಬಸ್ ಅನ್ನು ಬಲಕ್ಕೆ ಚಲಾಯಿಸುವ ಮೂಲಕ ಪ್ರಾಣಹಾನಿ ತಪ್ಪಿಸಿದ್ದಾರೆ.
ಪ್ಯಾಲೆಸ್ ಗುಟ್ಟಹಳ್ಳಿಯ ಅರಮನೆ ಮೈದಾನದ ಮುಂಭಾಗ ಗೇಟ್ ನಂಬರ್ 7ರಲ್ಲಿ ಇಂದು ಮಧ್ಯಾಹ್ನ ಘಟನೆ ನಡೆಯಿತು. ನಿಧಾನಗತಿಯಲ್ಲಿ ಬಸ್ ಚಲಿಸುತ್ತಿತ್ತು. ಈ ವೇಳೆ ರಸ್ತೆ ಬದಿಯ ಮರದ ಕೊಂಬೆ ಬಸ್ ಮೇಲೆ ಬಿದ್ದಿದೆ. ಕೊಂಬೆ ಬೀಳುತ್ತಿರುವುದನ್ನು ಗಮನಿಸಿದ ಚಾಲಕ ರಸ್ತೆಯ ಬಲಕ್ಕೆ ಬಸ್ ತಿರುಗಿಸಿದ್ದಾರೆ. ಹೀಗಾಗಿ ಕೊಂಬೆ ಬಸ್‍ನ ಕನ್ನಡಿ ಮೇಲೆ ಬಿದ್ದಿದೆ. ಒಂದು ವೇಳೆ ಮರದ ಕೊಂಬೆ ಬಸ್ ಮೇಲೆ ಬಿದ್ದಿದ್ದರೆ ಪ್ರಾಣ ಹಾನಿ ಸಂಭವಿಸುವ ಸಾಧ್ಯತೆ ಇತ್ತು ಎಂದು ಚಾಲಕ ತಿಳಿಸಿದರು. ಈ ಘಟನೆಯಿಂದ ಬೆಂಗಳೂರು-ಬಳ್ಳಾರಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಇತ್ತ, ಮರ ಬಿದ್ದ ಕಾರಣ ಮಹದೇವಪುರ ಬಸ್ ನಿಲ್ದಾಣದಿಂದ ಮಾರತ್ತಹಳ್ಳಿ ಕಡೆಗೆ ತೀವ್ರ ಸಂಚಾರ ದಟ್ಟಣೆವಿತ್ತು. ಕೆಲ ಬಿಎಂಟಿಸಿ ಬಸ್‍ಗಳು ಮಳೆ ನೀರಿನಿಂದ ಕೆಟ್ಟು ನಿಂತಿದ್ದ ಕಾರಣ ಅಲ್ಲಲ್ಲಿ ವಾಹನ ಸಾಗಾಟವೂ ಮಂದಗತಿಯಲ್ಲಿ ಕಂಡುಬಂದವು.







