ಬೆಂಗಳೂರು: ನಿರ್ಮಾಣ ಹಂತದ ಅಪಾರ್ಟ್ ಮೆಂಟ್ ನ 13ನೇ ಮಹಡಿಯಿಂದ ಬಿದ್ದು ಇಬ್ಬರು ಕಾರ್ಮಿಕರು ಮೃತ್ಯು

ಸಾಂದರ್ಭಿಕ ಚಿತ್ರ
ಬೆಂಗಳೂರು: ನಿರ್ಮಾಣ ಹಂತದ ಅಪಾರ್ಟ್ ಮೆಂಟ್ ನ 13ನೇ ಮಹಡಿಯಿಂದ ಬಿದ್ದು ಇಬ್ಬರು ಕಾರ್ಮಿಕರು ಮೃತಪಟ್ಟ ದಾರುಣ ಘಟನೆ ಬೆಳ್ಳಂದೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿರುವುದು ವರದಿಯಾಗಿದೆ.
ಮೃತರನ್ನು ಪಶ್ಚಿಮ ಬಂಗಾಳದ ಸೋನ್ ಪುರ್ ಮೂಲದ ಅಮೀರ್ ಹುಸೇನ್ (33) ಹಾಗೂ ಮುಮ್ತಾಝ್ ಅಲಿ (28) ಎಂದು ಗುರುತಿಸಲಾಗಿದೆ.
ಖಾಸಗಿ ಕಂಪನಿಯೊಂದರ ಅಪಾರ್ಟ್ ಮೆಂಟ್ ಕಟ್ಟಡ ಕಾಮಗಾರಿ ವೇಳೆ ಶುಕ್ರವಾರ ಮಧ್ಯಾಹ್ನ ಈ ಅವಘಡ ಸಂಭವಿಸಿದೆ. ಶುಕ್ರವಾರ ಮಧ್ಯಾಹ್ನ ಕಟ್ಟಡದ 13ನೇ ಮಹಡಿಯ ಬಾಲ್ಕನಿಯಲ್ಲಿ ನಿಂತು ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಬಾಲ್ಕನಿ ಕುಸಿದಿದೆ. ಪರಿಣಾಮ ಅಮೀರ್ ಹುಸೇನ್ ಹಾಗೂ ಮುಮ್ತಾಝ್ ಅಲಿ ನೆಲಕ್ಕೆ ಬಿದ್ದು ಮೃತಪಟ್ಟಿದ್ದಾರೆ.
ಸೂಕ್ತ ಭದ್ರತೆ ವಹಿಸದೆ ನಿರ್ಲಕ್ಷ್ಯತನದಿಂದ ಇಬ್ಬರು ಕಾರ್ಮಿಕರ ಸಾವಿಗೆ ಕಾರಣವಾದ ಆರೋಪದಡಿ ಗುತ್ತಿಗೆ ಕಂಪೆನಿಯ ಸಿಬ್ಬಂದಿ ಹಾಗೂ ಸೈಟ್ ಇಂಜಿನಿಯರ್ ವಿರುದ್ಧ ಬೆಳ್ಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





