Bengaluru | ಉಮರ್ ಖಾಲಿದ್, ಶರ್ಜೀಲ್ ಇಮಾಮ್ ಕುರಿತ ಪುಸ್ತಕ ಬಿಡುಗಡೆಗೆ ಬಿಜೆಪಿ ವಿರೋಧ

ಉಮರ್ ಖಾಲಿದ್, ಶರ್ಜೀಲ್ ಇಮಾಮ್ | Photo Credit : PTI
ಬೆಂಗಳೂರು : ದಿಲ್ಲಿಯ ಗಲಭೆ ಪ್ರಕರಣದಲ್ಲಿ ಯುಎಪಿಎ ಅಡಿಯಲ್ಲಿ ಬಂಧಿತರಾಗಿರುವ ಉಮರ್ ಖಾಲಿದ್ ಹಾಗೂ ಶರ್ಜೀಲ್ ಇಮಾಮ್ ಕುರಿತ ಪುಸ್ತಕ ಬಿಡುಗಡೆಗೆ ಬಿಜೆಪಿ ವಿರೋಧವಿದೆ. ಯಾವುದೇ ಕಾರಣಕ್ಕೂ ರಾಜ್ಯ ಸರಕಾರ ಇದಕ್ಕೆ ಅವಕಾಶ ಕೊಡಬಾರದು ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಒತ್ತಾಯಿಸಿದ್ದಾರೆ.
ಸೋಮವಾರ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 2020ರ ಫೆಬ್ರವರಿಯಲ್ಲಿ ನಡೆದ ದಿಲ್ಲಿ ಗಲಭೆ ಸಂಬಂಧ ಸುಪ್ರೀಂಕೋರ್ಟ್ ಇವರಿಬ್ಬರ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಶಾರ್ಜೀಲ್ ಇಮಾಮ್ ಸಿಎಎ ಮತ್ತು ಎನ್ಆರ್ಸಿ ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ಮಾಡಿದ ಭಾಷಣಗಳಿಗಾಗಿ ಬಂಧಿಸಲಾಗಿದೆ ಎಂದರು.
ಎನ್ಆರ್ಸಿ ಮತ್ತು ಸಿಎಎ ವಿರುದ್ಧ ಹೋರಾಟದ ಸಂದರ್ಭ ಬಾಂಬ್ ಸ್ಫೋಟದಲ್ಲಿ 53 ಜನರ ಹತ್ಯೆಯಾಗಿತ್ತು. ಸುಮಾರು 700 ಜನರು ಗಾಯಗೊಂಡಿದ್ದರು. ಈಗ ಇವರ ಬಗ್ಗೆಯೇ ಪುಸ್ತಕ ಬಿಡುಗಡೆ ಮಾಡಲಾಗುತ್ತಿದೆ. ಇವರಿಬ್ಬರ ಜೊತೆಗೆ 18 ಜನರನ್ನು ಬಂಧಿಸಲಾಗಿತ್ತು. 11 ಜನರಿಗೆ ಜಾಮೀನು ಸಿಕ್ಕಿದೆ. ಇನ್ನೂ 7 ಆರೋಪಿಗಳಿಗೆ ಜಾಮೀನು ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ.
ಬೆಂಗಳೂರು ಇಂಟರ್ ನ್ಯಾಷನಲ್ ಸೆಂಟರ್ನಲ್ಲಿ ಎ.28ರಂದು ನಡೆಯುತ್ತಿರುವ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನಟ ಪ್ರಕಾಶ್ ರಾಜ್, ಇತಿಹಾಸಕಾರರಾದ ರಾಮಚಂದ್ರಗುಹಾ ಹಾಗೂ ಜಾನಕಿ ನಾಯರ್ ಅವರು ಭಾಗವಹಿಸುತ್ತಿದ್ದಾರೆ. ಇದಕ್ಕೆ ಯಾವುದೇ ರೀತಿ ಅವಕಾಶ ಸಿಗಬಾರದು. ಕಾರ್ಯಕ್ರಮ ರದ್ದತಿಗಾಗಿ ಬಿಜೆಪಿ ನಿಯೋಗವು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಎನ್.ರವಿಕುಮಾರ್ ಆಗ್ರಹಿಸಿದರು.






