Bengaluru | ಕೈಕಾಲು ಕಟ್ಟಿ ಬೆಂಕಿ ಹಚ್ಚಿದ ಪ್ರಕರಣ: ಚಿಕಿತ್ಸೆ ಫಲಿಸದೆ ಗಾಯಾಳು ಮೃತ್ಯು

ಬೆಂಗಳೂರು: ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬನ ಕೈಕಾಲು ಕಟ್ಟಿ ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಗಂಭೀರವಾಗಿ ಗಾಯಗೊಂಡಿದ್ದ ಸಾಜಿ ಮುಹಮ್ಮದ್ (38) ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ನ.18ರಂದು ಬೆಳಗ್ಗೆ ಸುಮಾರು 6.30ರ ವೇಳೆಗೆ ಸಾಜಿ ಮುಹಮ್ಮದ್ ಅವರ ಕೈಕಾಲು ಕಟ್ಟಿ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು ಎನ್ನಲಾಗಿದೆ. ಈ ವೇಳೆ ಅವರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಸಾಜಿ ಮುಹಮ್ಮದ್ ಅವರು, ಗಿರಿನಗರದ ಈರಣ್ಣ ಗುಡ್ಡದಿಂದ ಕೆಳಗೆ ಬಿದ್ದಿದ್ದರು. ಇದರಿಂದ ಎದೆಗೆ ಬಲವಾದ ಪೆಟ್ಟು ಬಿದ್ದಿದ್ದು, ದೇಹದ ಶೇ.60ರಷ್ಟು ಭಾಗ ಸುಟ್ಟ ಗಾಯಗಳಾಗಿದ್ದವು ಎನ್ನಲಾಗಿದೆ.
ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಕರಣದ ಆರೋಪಿಗಳ ಪತ್ತೆಗಾಗಿ ಗಿರಿನಗರ ಠಾಣೆ ಪೊಲೀಸರು ವಿಶೇಷ ತಂಡ ರಚಿಸಿದ್ದು, ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದಾರೆ.




