Bengaluru | ‘ವಾಕಲೂರು ಸೇಫ್ 1ಸಾವಿರ ಕಿ.ಮೀ. ಫುಟ್ಪಾತ್’ ಅಭಿಯಾನಕ್ಕೆ ಚಾಲನೆ
ಥಣಿಸಂದ್ರ ಮುಖ್ಯ ರಸ್ತೆಯಲ್ಲಿ 11 ಕಿ.ಮೀ. ರಾಜ್ಯೋತ್ಸವ ಪಾದಚಾರಿ ನಡಿಗೆ
ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸುರಕ್ಷಿತ ಪಾದಚಾರಿ ಮಾರ್ಗಗಳ ಅಭಿಯಾನದಡಿ ಈಗಾಗಲೇ 1ಸಾವಿರ ಕಿ.ಮೀ.ಗೂ ಅಧಿಕ ಉದ್ದದ ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸಿ, ಪುನಃಸ್ಥಾಪಿಸಿರುವ ಹಿನ್ನೆಲೆಯಲ್ಲಿ, ಈ ಮಾರ್ಗಗಳ ಸುರಕ್ಷತೆಯನ್ನು ಪರಿಶೀಲಿಸುವ ಉದ್ದೇಶದಿಂದ ‘ಪ್ರಾಜೆಕ್ಟ್ ವಾಕಲೂರು’ ವತಿಯಿಂದ ‘ವಾಕಲೂರು ಸೇಫ್ 1ಸಾವಿರ ಕಿ.ಮೀ. ಫುಟ್ಪಾತ್ ಚಾಲೆಂಜ್’ ಅಭಿಯಾನಕ್ಕೆ ನವೆಂಬರ್ 1ರಂದು ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಚಾಲನೆ ನೀಡಲಾಯಿತು.
ಈ ಅಭಿಯಾನದ ಅಂಗವಾಗಿ ಥಣಿಸಂದ್ರ ಮುಖ್ಯ ರಸ್ತೆಯಲ್ಲಿ 11 ಕಿ.ಮೀ. ಉದ್ದದ ಕನ್ನಡ ರಾಜ್ಯೋತ್ಸವ ಪಾದಚಾರಿ ನಡಿಗೆಯನ್ನು ಆಯೋಜಿಸಲಾಗಿತು. ಬೆಂಗಳೂರು ಉತ್ತರ ನಗರ ಪಾಲಿಕೆಯ ಜಂಟಿ ಆಯುಕ್ತೆ ಪಲ್ಲವಿ ಅಭಿಯಾನಕ್ಕೆ ಚಾಲನೆ ನೀಡಿ, ಉದ್ಘಾಟನಾ ನಡಿಗೆಯಲ್ಲಿ ಪಾಲ್ಗೊಂಡರು.
ನಡಿಗೆಯ ಸಂದರ್ಭದಲ್ಲಿ ತಂಡವು ಮಾರ್ಗದುದ್ದಕ್ಕೂ ಕಂಡುಬಂದ ಪಾದಚಾರಿ ಸಂಚಾರಕ್ಕೆ ಅಡ್ಡಿಯಾಗುವ ಅಡೆತಡೆಗಳು ಮತ್ತು ಸಮಸ್ಯೆಗಳನ್ನು ಛಾಯಾಚಿತ್ರಗಳ ಮೂಲಕ ದಾಖಲಿಸಿ, ಅವುಗಳ ವಿವರಗಳನ್ನು ಸಂಗ್ರಹಿಸಿತು. ಇದೇ ವೇಳೆ ಈಗಾಗಲೇ ಕೈಗೊಳ್ಳಲಾಗಿರುವ ಸುಧಾರಣಾ ಕ್ರಮಗಳು ಮತ್ತು ದುರಸ್ತಿ ಕಾಮಗಾರಿಗಳನ್ನೂ ಗುರುತಿಸಿ ದಾಖಲಿಸಲಾಯಿತು.
ವಿವಿಧ ಇಲಾಖೆಗಳ ಸಮನ್ವಯ ಅಗತ್ಯವಿರುವ ಸಮಸ್ಯೆಗಳು ಹಾಗೂ ವಿಶೇಷ ಸಂದರ್ಭಗಳಲ್ಲಿ ನವೀನ ಪರಿಹಾರಗಳ ಅಗತ್ಯವಿರುವ ವಿಷಯಗಳ ಕುರಿತು ತಂಡವು ಚರ್ಚಿಸಿತು.
ಪರಿಶೀಲನೆಯ ಆಧಾರದ ಮೇಲೆ ಸಮಗ್ರ ವರದಿಯನ್ನು ಸಿದ್ಧಪಡಿಸಿ ಬೆಂಗಳೂರು ಉತ್ತರ ನಗರ ಪಾಲಿಕೆಗೆ ಸಲ್ಲಿಸಲಾಗುವುದು. ವರದಿಯಲ್ಲಿನ ಅಂಶಗಳ ಆಧಾರದ ಮೇಲೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಕೆಲವು ವಾರಗಳ ನಂತರ ಮತ್ತೊಮ್ಮೆ ಇದೇ ಮಾರ್ಗದಲ್ಲಿ ಪರಿಶೀಲನಾ ನಡಿಗೆ ನಡೆಸಿ ಕೈಗೊಂಡ ಕ್ರಮಗಳನ್ನು ಮರುಪರಿಶೀಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್, ಸುರಕ್ಷಿತ ಪಾದಚಾರಿ ಮಾರ್ಗಗಳನ್ನು ಕಲ್ಪಿಸುವ ಪಾಲಿಕೆಯ ಪ್ರಯತ್ನಗಳಿಗೆ ನಾಗರಿಕರು ಕೈಜೋಡಿಸಿರುವುದನ್ನು ಸ್ವಾಗತಿಸಿದರು. ನಾಗರಿಕರು ಸಲ್ಲಿಸುವ ವರದಿಗಳು ಮತ್ತು ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
‘ಪ್ರಾಜೆಕ್ಟ್ ವಾಕಲೂರು’ ಸಂಯೋಜಕ ಅರುಣ್ ಪೈ ಮಾತನಾಡಿ, ಮೊದಲ ಹಂತದಲ್ಲಿ ಪ್ರತಿ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕನಿಷ್ಠ 100 ಕಿ.ಮೀ. ಪಾದಚಾರಿ ಮಾರ್ಗಗಳಲ್ಲಿ ನಡಿಗೆ ನಡೆಸುವ ಉದ್ದೇಶವಿದೆ. ಆಯಾ ನಗರ ಪಾಲಿಕೆಗಳ ಆಯುಕ್ತರು ಸೂಚಿಸುವ ಮಾರ್ಗಗಳಲ್ಲಿ ಪರಿಶೀಲನೆ ನಡೆಸಲಾಗುವುದು. ಪಾದಚಾರಿ ಸ್ನೇಹಿ ನಗರ ನಿರ್ಮಿಸುವ ಜಿಬಿಎಯ ಉದ್ದೇಶಕ್ಕೆ ನಾಗರಿಕರ ಸಹಭಾಗಿತ್ವದ ಮೂಲಕ ಬೆಂಬಲ ನೀಡುವುದು ಈ ಅಭಿಯಾನದ ಗುರಿಯಾಗಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಪಾಲಿಕೆಯ ಇಂಜಿನಿಯರ್ ಗಳು, ನಿರ್ವಹಣಾ ಗುತ್ತಿಗೆದಾರರು, ನಗರ ಯೋಜಕರು ಹಾಗೂ ನಾಗರಿಕ ಸ್ವಯಂಸೇವಕರು ಭಾಗವಹಿಸಿದ್ದರು.






