Bengaluru | ಆರ್‌ಸಿಬಿ ಐಪಿಎಲ್ ಕಪ್ ಗೆದ್ದ ಸಂಭ್ರಮ: ವ್ಹೀಲಿಂಗ್ ಮಾಡುತ್ತಿದ್ದ 75 ವಾಹನಗಳು ವಶಕ್ಕೆ, ಪ್ರಕರಣ ದಾಖಲು

ಬೆಂಗಳೂರು : ಆರ್‌ಸಿಬಿ ತಂಡವು ಎರಡನೇ ಬಾರಿಗೆ ಐಪಿಎಲ್ ಕಪ್ ಗೆದ್ದ ಬೆನ್ನಲ್ಲೆ, ರಾಜಧಾನಿ ಬೆಂಗಳೂರಿನಾದ್ಯಂತ ಪೊಲೀಸ್ ಕಟ್ಟೆಚ್ಚರದ ನಡುವೆಯೂ ವ್ಹೀಲಿಂಗ್ ಮಾಡುತ್ತಿದ್ದ ದ್ವಿಚಕ್ರವಾಹನ ಹಾಗೂ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆಟೋ ಸೇರಿದಂತೆ 75 ವಾಹನಗಳನ್ನು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೇ31ರ ರವಿವಾರ ತಡರಾತ್ರಿ ಐಪಿಎಲ್-2026ರ ಫೈನಲ್ ಹಿನ್ನೆಲೆಯಲ್ಲಿ ನಗರದಲ್ಲಿ ಅಭಿಮಾನಿಗಳ ಸಾರ್ವಜನಿಕ ಸಂಭ್ರಮಾಚರಣೆಗೆ ಕಡಿವಾಣ ಹಾಕಲಾಗಿತ್ತು. ಪಟಾಕಿ ಸಿಡಿಸುವುದು, ಮೆರವಣಿಗೆ ಸೇರಿದಂತೆ ಇನ್ನಿತರ ಚಟುವಟಿಕೆಗಳನ್ನು ಮಾಡದಂತೆ ಪೊಲೀಸ್ ಮಾರ್ಗಸೂಚಿ ಹೊರಡಿಸಲಾಗಿತ್ತು.
ಆದಾಗ್ಯೂ ಮುಂಜಾಗ್ರತ ಕ್ರಮವಾಗಿ ಆಯಕಟ್ಟಿನ ಜಾಗಗಳಲ್ಲಿ ನಾಕಾಬಂದಿ ಹಾಕಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ನಗರ ಉತ್ತರ ವಿಭಾಗದ 13 ಪೊಲೀಸ್ ಠಾಣಾ ವ್ಯಾಪ್ತಿಗಳ ಇನ್‍ಸ್ಪೆಕ್ಟರ್‍ಗಳಿರುವ ವಿಶೇಷ ತಂಡವು ಕಾರ್ಯಾಚರಣೆ ನಡೆಸಿ ತಡರಾತ್ರಿ ವ್ಹೀಲಿಂಗ್ ಮಾಡುತ್ತಿದ್ದ 71 ದ್ವಿಚಕ್ರವಾಹನ ಹಾಗೂ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ 3 ಆಟೋ ಹಾಗೂ ಒಂದು ಕಾರು ಸೇರಿದಂತೆ 75 ವಾಹನಗಳನ್ನು ಜಪ್ತಿ ಮಾಡಿದೆ. ಚಾಲಕರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮದ್ಯ ಸೇವನೆ, ಅತಿ ವೇಗದ ಚಾಲನೆ: 854 ಪ್ರಕರಣ ದಾಖಲು
ಮದ್ಯ ಸೇವನೆ ಹಾಗೂ ಅತಿ ವೇಗವಾಗಿ ವಾಹನ ಚಲಾಯಿಸಿದ ಸವಾರರಿಗೆ ಬಿಸಿ ಮುಟ್ಟಿಸಿರುವ ನಗರ ಸಂಚಾರ ಪೊಲೀಸರು ಮೇ 25ರಿಂದ 31ರವರೆಗೆ ಕಾರ್ಯಾಚರಣೆ ನಡೆಸಿ 854 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಮೇ 25ರಿಂದ 31ರವರೆಗೆ ನಗರದ 53 ಸಂಚಾರಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿದ್ದವರ ಮೇಲೆ 699 ಪ್ರಕರಣ ದಾಖಲಿಸಲಾಗಿದೆ. ಅದೇ ರೀತಿ ಅಜಾಗರೂಕತೆ ಹಾಗೂ ವೇಗವಾಗಿ ವಾಹನ ಚಾಲನೆ ಮಾಡುತ್ತಿದ್ದವರ ಮೇಲೆ 155 ಪ್ರಕರಣ ದಾಖಲಿಸಿ 1.56 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಹಿರಿಯ ಸಂಚಾರ ಪೊಲೀಸರು ತಿಳಿಸಿದ್ದಾರೆ.






