ಬೆಂಗಳೂರು: ಲಾಡ್ಜ್ ಮೇಲಿಂದ ತಳ್ಳಿ ಪ್ರಿಯತಮೆಯ ಕೊಲೆ: ಪ್ರಿಯಕರನ ಬಂಧನ
ಬೆಂಗಳೂರು: ಪ್ರಿಯತಮೆಯನ್ನು ಲಾಡ್ಜ್ ಮೇಲಿಂದ ಕೆಳಗೆ ತಳ್ಳಿ ಪ್ರಿಯಕರನೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಗಂಗಮ್ಮಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ವರದಿಯಾಗಿದೆ.
ಐಶ್ವರ್ಯ ಕೊಲೆಯಾದ ಯುವತಿ. ಸಂತೋಷ್ ಕೊಲೆ ಆರೋಪಿಯಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಸಂತೋಷ್ ಹಾಗೂ ಐಶ್ವರ್ಯ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಐಶ್ವರ್ಯ ಮನೆಯವರಿಂದ ಇವರ ಪ್ರೀತಿಗೆ ವಿರೋಧ ವ್ಯಕ್ತವಾಗಿತ್ತು. ಆದರೆ ಐಶ್ವರ್ಯ, ಸಂತೋಷ್ ನನ್ನೇ ಮದುವೆಯಾಗಲು ಹಠ ಹಿಡಿದಿದ್ದಳು. ಹೀಗಾಗಿ ಎರಡು ಕುಟುಂಬದ ನಡುವೆ ರಾಜಿ ಪಂಚಾಯಿತಿ ಆಗಿತ್ತು. ಈ ವೇಳೆ ಸಂತೋಷ್ ಮದುವೆಯಾಗಲು ಮೂರು ವರ್ಷಗಳ ಸಮಯ ಕೇಳಿದ್ದ ಎಂದು ತಿಳಿದುಬಂದಿದೆ.
ಮೂರು ವರ್ಷಗಳ ಬಳಿಕ ಪುನಃ ರಾಜಿ ಪಂಚಾಯಿತಿ
ಮೂರು ವರ್ಷ ಕಳೆದ ಮೇಲೆ ಸಂತೋಷ್ ಮದುವೆಯಾಗಲು ಹಿಂದೇಟು ಹಾಕಿದ್ದ. ಈ ವೇಳೆ ಎರಡು ಕುಟುಂಬದವರು ಪುನಃ ರಾಜಿ ಪಂಚಾಯಿತಿ ನಡೆಸಿ ಮದುವೆಯಾಗಲು ಪುನಃ ಆರು ತಿಂಗಳು ಕಾಲಾವಕಾಶ ನೀಡಿದ್ದರು. ಆದರೆ ಅದಾದ ಬಳಿಕವೂ ಮದುವೆಯಾಗುವುದಿಲ್ಲ ಎಂದು ಆತ ಕ್ಯಾತೆ ತೆಗೆದಿದ್ದ. ಇದಾದ ಬಳಿಕ ಐಶ್ವರ್ಯ ಕೂಡ ಸಂತೋಷ್ ನನ್ನು ದೂರ ಮಾಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಬೆದರಿಸಿ ಲಾಡ್ಜ್ ಗೆ ಕರೆಸಿಕೊಂಡಿದ್ದ ಸಂತೋಷ್
ಇಷ್ಟೆಲ್ಲ ಆದ ಬಳಿಕ ನ.19ರಂದು ನಿನ್ನ ಖಾಸಗಿ ವೀಡಿಯೋ ತನ್ನಲ್ಲಿದ್ದು, ಲಾಡ್ಜ್ ಗೆ ಬಂದಿಲ್ಲ ಎಂದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಸಿ ಐಶ್ವರ್ಯರನ್ನು ಸಂತೋಷ್ ಲಾಡ್ಜ್ ಗೆ ಕರೆಸಿಕೊಂಡಿದ್ದ. ಇಲ್ಲಿ ಇಬ್ಬರ ನಡುವೆ ಜಗಳ ಆಗಿ ಮೂರನೇ ಮಹಡಿಯ ಲಾಡ್ಜ್ ನಿಂದ ಐಶ್ವರ್ಯರನ್ನು ಆರೋಪಿ ಸಂತೋಷ್ ಕೆಳಗೆ ತಳ್ಳಿದ್ದಾನೆ. ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಐಶ್ವರ್ಯ ಇದೀಗ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ
ಮೊದಲಿಗೆ ಆತ್ಮಹತ್ಯೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಸಿಸಿಟಿವಿ ಕ್ಯಾಮರಾದ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿದಾಗ ಅಸಲಿ ಕೃತ್ಯ ಬೆಳಕಿಗೆ ಬಂದಿದೆ.
ಸಂತೋಷ್ ನನ್ನು ಬಂಧಿಸಿರುವ ಗಂಗಮ್ಮಗುಡಿ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.








