ಬೆಂಗಳೂರು: ಪ್ರೀತಿ ನಿರಾಕರಿಸಿದ ಯುವತಿ ಮನೆ ಎದುರೇ ಯುವಕ ಆತ್ಮಹತ್ಯೆ

ಬೆಂಗಳೂರು: ಪ್ರೀತಿಸಲು ನಿರಾಕರಿಸಿದ್ದಕ್ಕೆ ಯುವತಿ ಮನೆ ಮುಂದೆಯೇ ಹೋಗಿ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡಿಗೆಪಾಳ್ಯದಲ್ಲಿ ವರದಿಯಾಗಿದೆ.
ಆನೇಕಲ್ ತಾಲೂಕಿನ ಜಿಗಣಿಯ ಕಲ್ಲುಬಾಲು ಗ್ರಾಮದ ರಾಕೇಶ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಪದವಿ ವ್ಯಾಸಂಗ ಮಾಡುತ್ತಿದ್ದ ರಾಕೇಶ್, ಐದಾರು ವರ್ಷಗಳಿಂದ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ. ಇತ್ತೀಚೆಗೆ ತಾನು ಪ್ರೀತಿಸಿದ ಯುವತಿಯು ಬೇರೆ ಹುಡುಗನ ಜೊತೆ ಓಡಾಡುತ್ತಿರುವುದನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದ್ದ.
ಇದೇ ವಿಚಾರಕ್ಕಾಗಿ ಫೋನ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದ. ಈ ಬಗ್ಗೆ ಯುವತಿ ತಲೆಕೆಡಿಸಿಕೊಂಡಿರಲಿಲ್ಲ. ಇದರಿಂದ ಡಿ.6ರ ಬುಧವಾರ ಯುವತಿ ಮನೆಗೆ ಹೋಗಿದ್ದ ಯುವಕ ತನ್ನನ್ನು ಪ್ರೀತಿಸುವಂತೆ ಕೇಳಿದ್ದಾನೆ. ಇದಕ್ಕೆ ಒಲ್ಲೆ ಎಂದಿದ್ದಕ್ಕೆ ಯುವತಿ ಮೇಲೆ ಕೆಂಡಕಾರಿದ್ದ. ಪ್ರೀತಿಸದಿದ್ದರೆ ಸಾಯುವುದಾಗಿ ಬೆದರಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಇದನ್ನು ಕಂಡ ಸ್ಥಳೀಯರು ಆತನನ್ನು ರಕ್ಷಿಸಿ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಬೆಳಗ್ಗೆ ಸಾವನ್ನಪ್ಪಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿರುವುದಾಗಿ ಗೊತ್ತಾಗಿದೆ.







