‘ಸಾಫ್ಟ್‌ವೇರ್ ಉನ್ನತೀಕರಣ’ ಜಿಬಿಎ ಗ್ರಾಹಕರಿಗೆ ಸರಾಸರಿ ವಿದ್ಯುತ್ ಬಿಲ್ : ಬೆಸ್ಕಾಂ

ಬೆಂಗಳೂರು, ಸೆ. 30: ಸಾಫ್ಟ್‌ವೇರ್ ಉನ್ನತೀಕರಣದ ಕಾರ್ಯ ಕೈಗೊಂಡಿರುವ ಹಿನ್ನೆಲೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ವ್ಯಾಪ್ತಿಯ ಗ್ರಾಹಕರಿಗೆ ಕಳೆದ ಆರು ತಿಂಗಳ ಸರಾಸರಿ ಪರಿಗಣಿಸಿ ಮುಂದಿನ ತಿಂಗಳ ವಿದ್ಯುತ್ ಬಿಲ್ ವಿತರಿಸಲಾಗುವುದು ಎಂದು ಬೆಸ್ಕಾಂ ತಿಳಿಸಿದೆ.
ಮಂಗಳವಾರ ಈ ಸಂಬಂಧ ಪ್ರಕಟಣೆ ನೀಡಿರುವ ಬೆಸ್ಕಾಂ, ಬಿಲ್ಲಿಂಗ್ ತಂತ್ರಜ್ಞಾನದ ಸುಧಾರಣೆಗೆ ಬೆಸ್ಕಾಂನ ಮಾಹಿತಿ ತಂತ್ರಜ್ಞಾನ ವಿಭಾಗವು ಕೈಗೊಂಡಿರುವ ಸಾಫ್ಟ್‌ವೇರ್ ಉನ್ನತೀಕರಣ ಕಾರ್ಯ ಪ್ರಗತಿಯಲ್ಲಿರುವುದರಿಂದ ಈ ತಿಂಗಳ ಅ.1ರಿಂದ 15ರ ವರೆಗಿನ ನಿಗದಿತ ಅವಧಿಯಲ್ಲಿ ಮೀಟರ್ ರೀಡರ್‍ಗಳು ಜಿಬಿಎ ವ್ಯಾಪ್ತಿಯಲ್ಲಿ ಮಾಪನಕ್ಕೆ ಬರುವುದಿಲ್ಲ.
ಬದಲಿಗೆ ಗ್ರಾಹಕರ ಕಳೆದ ಆರು ತಿಂಗಳ ಸರಾಸರಿ ಲೆಕ್ಕ ಹಾಕಿ, ವಿದ್ಯುತ್ ಬಿಲ್ ನೀಡಲಾಗುತ್ತದೆ. ಬೆಸ್ಕಾಂ ಮಿತ್ರ ಆಪ್, ಉಪ ವಿಭಾಗ ಕೇಂದ್ರ, ಯುಪಿಐ ಆಪ್‍ಗಳ ಮೂಲಕ ಬಿಲ್ ಪಾವತಿಸಬಹುದಾಗಿದೆ. ಈ ಪ್ರಕ್ರಿಯೆಯಿಂದ ಗೃಹಜ್ಯೋತಿ ಫಲಾನುಭವಿಗಳು ಯೋಜನೆಯ ಲಾಭ ಪಡೆಯುವಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.





