ಬೆಂಗಳೂರು | 100 ಬೈಕ್ ಕಳವು ಮಾಡಿದ್ದ ವ್ಯಕ್ತಿ ಕೊನೆಗೂ ಸೆರೆ

ಬೆಂಗಳೂರು: ಬೆಂಗಳೂರು ಸೇರಿದಂತೆ ವಿವಿಧೆಡೆ ಬರೀ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪದಡಿ ವ್ಯಕ್ತಿಯನ್ನು ಕೆ.ಆರ್.ಪುರ ಠಾಣೆ ಪೊಲೀಸರು ಬಂಧಿಸಿ 1.45 ಕೋಟಿ ರೂ ಮೌಲ್ಯದ 100 ಬೈಕ್‍ಗಳನ್ನು ಜಪ್ತಿ ಮಾಡಲಾಗಿದೆ.
ಶುಕ್ರವಾರ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ದಯಾನಂದ್, ಪ್ರಕರಣ ಸಂಬಂಧ ಪ್ರಸಾದ್ ಬಾಬು ಎಂಬಾತನನ್ನು ಬಂಧಿಸಲಾಗಿದ್ದು, 24 ಬುಲೆಟ್ ಬೈಕ್, 16 ಸುಜುಕಿ ಆಕ್ಸಿಸ್, 16 ಪಲ್ಸರ್ ಸೇರಿದಂತೆ ವಿವಿಧ ಕಂಪೆಂನಿಗಳ 1.45 ಕೋಟಿ ಮೌಲ್ಯದ 100 ದ್ವಿಚಕ್ರವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದರು.
ಜ.10ರಂದು ಮನೆ ಮಂಭಾಗ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದ್ದು, ಪ್ರಕರಣ ದಾಖಲಿಸಿಕೊಂಡ ಕೆಆರ್ ಪುರ ಠಾಣೆ ಪೊಲೀಸರು ಹೊಸಕೋಟೆ ಟೋಲ್ ಬಳಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮೂರು ವರ್ಷಗಳಲ್ಲಿ 100ಕ್ಕೂ ಅಧಿಕ ವಾಹನ ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು, ಕೋಲಾರ, ಆಂಧ್ರ, ತೆಲಂಗಾಣ ಹಾಗೂ ತಮಿಳುನಾಡಿನಲ್ಲಿ ಕಳ್ಳತನ ಮಾಡಿದ್ದ 51 ಪ್ರಕರಣಗಳನ್ನು ಬೇಧಿಸಲಾಗಿದ್ದು, 49 ದ್ವಿಚಕ್ರವಾಹನಗಳ ಮಾಲೀಕರ ಪತ್ತೆ ಕಾರ್ಯ ನಡೆಸಲಾಗುತ್ತಿದೆ ಎಂದು ಆಯುಕ್ತರು ಮಾಹಿತಿ ನೀಡಿದರು.







