ಪ್ರಜಾಪ್ರಭುತ್ವ ಉಳಿಸಲು ಅಂತಾರಾಷ್ಟ್ರೀಯ ‘ಪ್ರಜಾಪ್ರಭುತ್ವ ದಿನವನ್ನು ಆಚರಿಸಿ : ಬಿಳಿಮಲೆ
ಬೆಂಗಳೂರು: ಪರಸ್ಪರ ಮುಟ್ಟಿಕೊಳ್ಳುವುದೆ ಸಮಸ್ಯೆಯಾಗಿರುವ ಇಂದಿನ ಸಮಾಜದಲ್ಲಿ ಕೈಗೆ ಕೈಕೊಟ್ಟು ನಿಲ್ಲುವ ಮೂಲಕ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಿಸುತ್ತಿದ್ದು, ಪ್ರಜಾಪ್ರಭುತ್ವವನ್ನು ಉಳಿಸುವ ಸಲುವಾಗಿ ಎಲ್ಲರು ಪ್ರಜಾಪ್ರಭುತ್ವ ದಿನ ಆಚರಿಸಬೇಕಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಆಯೋಜಿಸಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳು, ಕಾರ್ಮಿಕ ಮತ್ತು ಕನ್ನಡಪರ ಸಂಘಟನೆಗಳ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು, ರವಿವಾರ(ಸೆ.15) ರಾಜ್ಯಾದ್ಯಂತ ನಡೆಯಲಿರುವ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಮಾಡಲಾಗುತ್ತಿದೆ ಎಂದರು.
ಅಂಬೇಡ್ಕರ್ ಅಸ್ಪೃಶ್ಯತೆಯನ್ನು ಮಹಾಶಾಪವೆಂದು ಬಣ್ಣಿಸಿದ್ದನ್ನು ನೆನಪಿಸಿಕೊಂಡರೆ, ಇಂದು ರಾಜ್ಯಾದ್ಯಂತ ಸುಮಾರು ಎರಡೂವರೆ ಸಾವಿರ ಕಿ.ಮೀ. ಉದ್ದ ಮಾನವ ಸರಪಳಿಯ ನಿರ್ಮಾಣದ ಮೂಲಕ ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಚರಿಸಲು ಸರಕಾರವು ನಿರ್ಧರಿಸಿರುವುದು ಅತ್ಯಂತ ಗಮನಾರ್ಹವಾದ ಸಂಗತಿ. ಇದು ಯಶಸ್ವಿಯಾಗುವುದು ಪ್ರಜಾಪ್ರಭುತ್ವದ ಹಿತದೃಷ್ಠಿಯಿಂದ ನಿರ್ಣಾಯಕ ಎಂದು ಅವರು ಹೇಳಿದರು.
ಸರಕಾರವು ಇಂತಹ ಮಹತ್ವದ ಯೋಜನೆಯೊಂದನ್ನು ರೂಪಿಸಿದೆ. ಇದು ಜನಪರವಾದ ಆಂದೋಲನವಾಗಿ ರೂಪುಗೊಳ್ಳಬೇಕಾದಲ್ಲಿ ಆಡಳಿತ ಯಂತ್ರದ ಜವಾಬ್ದಾರಿ ದೊಡ್ಡದಾಗಿರುತ್ತದೆ. ಆಡಳಿತ ಯಂತ್ರವು ಸರಕಾರದ ಆಶಯವನ್ನು ಅರ್ಥೈಸಿಕೊಂಡು ಇದರ ಪ್ರಾಮುಖ್ಯತೆಯ ಅರಿವನ್ನು ಜನ ಸಾಮಾನ್ಯರಲ್ಲಿ ಮೂಡಿಸುವ ಮೂಲಕ ಈ ಜನಾಂದೋಲನವನ್ನು ಯಶಸ್ವಿಯಾಗಿಸಬೇಕು ಎಂದು ಅವರು ಕರೆ ನೀಡಿದರು.
ಪ್ರಜಾಪ್ರಭುತ್ವ ಮನುಕುಲ ಕಂಡುಕೊಂಡ ಮಹತ್ವದ ಆಡಳಿತ ವ್ಯವಸ್ಥೆಯಾಗಿದ್ದು, ಈ ವ್ಯವಸ್ಥೆ ಮನುಷ್ಯನ ವೈಯಕ್ತಿಕ ವಿಕಾಸದ ಜೊತೆಯಲ್ಲಿ ಸಾಮಾಜಿಕ, ಆರ್ಥಿಕ ವಿಕಾಸಕ್ಕೆ ಬಹುಮುಖ್ಯ ಕೊಡುಗೆಯನ್ನು ಕೊಟ್ಟಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನವು ಜಗತ್ತಿನ ಅತ್ಯುತ್ತಮ ಗ್ರಂಥಗಳಲ್ಲಿ ಒಂದಾಗಿದ್ದು, ಸಮರ್ಥ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನೀಡಿರುವ ಈ ಸಂವಿಧಾನವನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಅವರು ತಿಳಿಸಿದರು.
ಸಂವಿಧಾನವನ್ನು ರಕ್ಷಿಸಿದರೆ ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ ಎನ್ನುವ ಗಟ್ಟಿ ಅರಿವಿನ ಮೂಲಕ ನಮ್ಮ ಜವಾಬ್ದಾರಿಯನ್ನು ನಿರ್ವಹಿಸಿದರೆ ಮಾತ್ರ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಅರ್ಥಪೂರ್ಣವಾಗುತ್ತದೆ. ಈ ನಿಟ್ಟಿನಲ್ಲಿ ರವಿವಾರದ ನಡೆಯುವ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ವಿನೂತನ ಆಚರಣೆ ಸಾಂಕೇತಿಕವೂ, ಚಾರಿತ್ರಿಕವೂ ಆಗಿದೆ ಎಂದರು.
ನಾಡಿನ ಎಲ್ಲ ನಾಗರಿಕರು ಪ್ರಜಾಪ್ರಭುತ್ವ ದಿನದ ಮಾನವ ಸರಪಳಿಯಲ್ಲಿ ಪಾಲ್ಗೊಂಡು ಪರಸ್ಪರ ಕೈ ಕೈ ಭದ್ರಪಡಿಸಿಕೊಳ್ಳುವ ಮೂಲಕ ನಾಗರೀಕ ಸಮಾಜವಾಗಿ ಪ್ರಜಾಪ್ರಭುತ್ವಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಬೇಕು ಎಂದು ಡಾ. ಪುರುಷೋತ್ತಮ ಬಿಳಿಮಲೆ ಕರೆ ನೀಡಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್, ಆಯುಕ್ತ ರಾಕೇಶ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಡಾ. ಧರಣಿದೇವಿ ಮಾಲಗತ್ತಿ, ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ ಹಾನಗಲ್ಲ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಕಾರ್ಮಿಕ ಮತ್ತು ಕನ್ನಡ ಪರ ಸಂಘಟನೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.