ಗ್ರಾಮೀಣ ಭಾಗಗಳ ಪರ್ಯಾಯ ಇಂಧನಕ್ಕಾಗಿ ಜೈವಿಕ ಇಂಧನ ನೀತಿ; ಶೀಘ್ರದಲ್ಲೆ ಜಾರಿಗೆ ಕ್ರಮ: ಸಚಿವ ಪ್ರಿಯಾಂಕ್

ಬೆಂಗಳೂರು: ಜೈವಿಕ ಇಂಧನಗಳು, ತ್ಯಾಜ್ಯದಿಂದ ಶಕ್ತಿ ಉತ್ಪಾದನೆ, ಹಸಿರು ರಾಸಾಯನಿಕಗಳ ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ನವೋದ್ಯಮ ನೇತೃತ್ವದ ಪರಿಹಾರಗಳನ್ನು ಬೆಂಬಲಿಸಲು ಜೈವಿಕ ಇಂಧನ ಇನ್ನೋವೇಶನ್ ಲ್ಯಾಬ್ಗಳನ್ನು ಸ್ಥಾಪಿಸುವ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಸದಸ್ಯರು ಮತ್ತು ಇತರ ಪ್ರಮುಖ ಪಾಲುದಾರರೊಂದಿಗೆ ಸಭೆ ನಡೆಸಿದರು.
ಕರ್ನಾಟಕದ ಮುಂಬರುವ ಜೈವಿಕ ಇಂಧನ ನೀತಿಯನ್ನು ಪರಿಶೀಲಿಸಿದ ಸಚಿವರು ಸರ್ಕಾರ ಜೈವಿಕ ಇಂಧನ ನೀತಿಯನ್ನು ತರಲು ಬದ್ಧವಾಗಿದೆ ಎಂದು ಪ್ರಕಟಿಸಿದರು. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಪರ್ಯಾಯ ಇಂಧನ ಬಳಸಿಕೊಳ್ಳಲು ಅನುಕೂಲವಾಗಲಿದೆ ಎಂದೂ ಸಚಿವರು ಹೇಳಿದರು.
“ರಾಜ್ಯಾದ್ಯಂತ ಪ್ರಾದೇಶಿಕ ಜೈವಿಕ ಇಂಧನ ವಲಯಗಳನ್ನು ಅಭಿವೃದ್ಧಿಪಡಿಸುವ ಸಂಬಂಧ ನಾವು ಚರ್ಚಿಸಿದ್ದೇವೆ, ಇದರಿಂದಾಗಿ ಪೂರೈಕೆ ಸರಪಳಿಗಳು, ಸಂಸ್ಕರಣಾ ಘಟಕಗಳು ಮತ್ತು ಅಂತಿಮ ಬಳಕೆದಾರರು ಸಹ-ಸ್ಥಳೀಯ ಮತ್ತು ಆರ್ಥಿಕವಾಗಿ ಪ್ರಯೋಜನ ಪಡೆಯುತ್ತಾರೆ” ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್ ನಾಯಕ್ ಹಾಗೂ ಇನ್ನಿತರ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.







