ಬಿಟ್ಕಾಯಿನ್ ಹಗರಣ ಪ್ರಕರಣ: ಶ್ರೀಕಿ ಸಹಿತ ಮೂವರಿಗೆ ಸೇರಿದ 47 ಲಕ್ಷ ರೂ.ಮೌಲ್ಯದ ಬಿಟ್ಕಾಯಿನ್ ವಶ

ಸಾಂದರ್ಭಿಕ ಚಿತ್ರ | Image by starline on Magnific
ಬೆಂಗಳೂರು : ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ಬಹುಕೋಟಿ ಬಿಟ್ಕಾಯಿನ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಈ.ಡಿ.)ದ ಅಧಿಕಾರಿಗಳು ಸೋಮವಾರ ನಗರದಲ್ಲಿ ಕಾರ್ಯಾಚರಣೆ ನಡೆಸಿದ್ದು, ಮೂವರು ಪ್ರಮುಖ ಆರೋಪಿಗಳಿಂದ ಲಕ್ಷಾಂತರ ರೂ. ಮೌಲ್ಯದ ಬಿಟ್ಕಾಯಿನ್ ಹಾಗೂ ಡಿಜಿಟಲ್ ಉಪಕರಣಗಳನ್ನು ವಶಪಡಿಸಿಕೊಂಡಿರುವುದಾಗಿ ವರದಿಯಾಗಿದೆ.
ಪ್ರಮುಖ ಆರೋಪಿಗಳಾದ ಶ್ರೀಕೃಷ್ಣ ಯಾನೆ ಶ್ರೀಕಿ, ರಾಬಿನ್ ಖಂಡೇವಾಲ ಮತ್ತು ಸುನೀಶ್ ಹೆಗ್ಡೆ ಎಂಬುವವರಿಂದ ಸುಮಾರು 50 ಸಾವಿರ ಯುಎಸ್ಡಿಟಿ ಮೌಲ್ಯದ ಬಿಟ್ಕಾಯಿನ್ ಅನ್ನು ಇ.ಡಿ. ಅಧಿಕಾರಿಗಳು ಜಪ್ತಿ ಮಾಡಿದ್ದು, ಇದರ ಭಾರತೀಯ ಕರೆನ್ಸಿ ಮೌಲ್ಯ ಸುಮಾರು 47,66,275 ರೂಪಾಯಿಗಳಾಗಿದೆ ಎಂದು ಅಂದಾಜಿಸಲಾಗಿದೆ. ಜೊತೆಗೆ ಆರೋಪಿಗಳಿಂದ ಕೃತ್ಯಕ್ಕೆ ಬಳಸಲಾಗಿದ್ದ 3 ಲ್ಯಾಪ್ಟಾಪ್ ಹಾಗೂ 3 ಮೊಬೈಲ್ ಫೋನ್ಗಳನ್ನು ಸಹ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ.ಡಿ. ತನಿಖೆಯ ವೇಳೆ ಆರೋಪಿಗಳು ಅಮೆರಿಕ ಮೂಲದ ಪ್ರತಿಷ್ಠಿತ ಕಂಪೆನಿಯೊಂದರ ನೆಟ್ವರ್ಕ್ ಅನ್ನು ಹ್ಯಾಕ್ ಮಾಡಿರುವುದು ಬೆಳಕಿಗೆ ಬಂದಿದೆ. ಹ್ಯಾಕ್ ಮಾಡಿದ ಹಣದ ಮೂಲಕವೇ ಆರೋಪಿಗಳು 50 ಸಾವಿರ ಯುಎಸ್ಡಿಟಿ ಮೌಲ್ಯದ ಬಿಟ್ಕಾಯಿನ್ ಖರೀದಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ ಎಂದು ವರದಿಯಾಗಿದೆ.
ಸದ್ಯ, ಈ.ಡಿ. ಅಧಿಕಾರಿಗಳ ವಶದಲ್ಲಿರುವ ಈ ಮೂವರೂ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಈ ಪ್ರಕರಣದ ತನಿಖೆಯನ್ನು ಈ.ಡಿ. ಮತ್ತಷ್ಟು ಚುರುಕುಗೊಳಿಸಿದೆ.






