ರಾಜ್ಯ ಬಿಜೆಪಿಯಲ್ಲಿ ‘ನಾಯಕತ್ವ ಬದಲಾವಣೆ’ ಚರ್ಚೆ ಆರಂಭ

ಬೆಂಗಳೂರು : ಮುಂಬರಲಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತು 2028ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರು ಸೇರಿದಂತೆ ಪಕ್ಷದಲ್ಲಿನ ನಾಯಕತ್ವದ ಬದಲಾವಣೆ ಸಂಬಂಧಿಸಿದಂತೆ ಪಕ್ಷದ ವಲಯದಲ್ಲಿ ಚರ್ಚೆ ಆರಂಭವಾಗಿದೆ.
ಹಾಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನೇ ಮುಂದುವರಿಸಬೇಕೇ? ಅಥವಾ ಹೊಸಬರಿಗೆ ಪಕ್ಷದ ಅಧ್ಯಕ್ಷ ಸ್ಥಾನವನ್ನು ನೀಡಬೇಕೆಂಬ ಕುರಿತು ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ನವೆಂಬರ್ ತಿಂಗಳು ನಿರ್ಣಾಯಕವಾಗುವ ಸಾಧ್ಯತೆಯಿದೆ.
ಯತ್ನಾಳ್ ಭೇಟಿ: ನಾಯಕತ್ವದ ಚರ್ಚೆಯ ಬೆನ್ನಲ್ಲೆ ಪಕ್ಷದಿಂದ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ರಾಜ್ಯಾಧ್ಯಕ್ಷ ವಿಜಯೇಂದ್ರ ಇತ್ತೀಚಿಗೆ ಭೇಟಿ ಮಾಡಿದ್ದು, ಪಕ್ಷದ ವಲಯದಲ್ಲಿ ಕುತೂಹಲ ಮೂಡಿಸಿದೆ.
ಸೋಮಣ್ಣ, ಬೆಲ್ಲದ್, ನಿರಾಣಿ ಮುಂಚೂಣಿಗೆ: ವಿಜಯೇಂದ್ರ ಬದಲಿಗೆ ಹೊಸ ಅಧ್ಯಕ್ಷರನ್ನು ನೇಮಿಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಹಲವು ನಾಯಕರ ಹೆಸರುಗಳು ಚರ್ಚೆಯಲ್ಲಿವೆ. ಕೇಂದ್ರ ಸಚಿವ ವಿ. ಸೋಮಣ್ಣ, ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ಮತ್ತು ಮಾಜಿ ಸಚಿವ ಮುರುಗೇಶ್ ಆರ್.ನಿರಾಣಿ ಪ್ರಮುಖ ಸಂಭಾವ್ಯ ಅಭ್ಯರ್ಥಿಗಳೆಂದು ಹೇಳಲಾಗುತ್ತಿದೆ.






