ಪಾಕಿಸ್ತಾನ, ಬಾಂಗ್ಲಾದೇಶ ಬಿಟ್ಟರೆ ಬಿಜೆಪಿಗರಿಗೆ ಬೇರೆ ದೇಶಗಳ ಪರಿಚಯವಿದ್ದಂತಿಲ್ಲ : ಸಚಿವ ಪ್ರಿಯಾಂಕ್ ಖರ್ಗೆ ಟೀಕೆ

ಬೆಂಗಳೂರು: ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳನ್ನು ಬಿಟ್ಟರೆ ಬಿಜೆಪಿಯವರಿಗೆ ಜಗತ್ತಿನ ಮತ್ತೊಂದು ದೇಶದ ಪರಿಚಯವಿದ್ದಂತಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, “ಮಾನ್ಯ ಅಶೋಕ್ ಅವರೇ, ನಿಮ್ಮ ಆರೆಸ್ಸೆಸ್ ಅಮೆರಿಕದಿಂದ ದೇಣಿಗೆ ಪಡೆದುಕೊಂಡಿರುವುದನ್ನು ನಿಮಗೆ ತಿಳಿಸಿಲ್ಲ ಎಂದೆನಿಸುತ್ತದೆ. ಹಾಗೆಯೇ, ಪಾಕಿಸ್ತಾನದೊಂದಿಗೆ ಉತ್ತಮ ಸಂಬಂಧ ಇಟ್ಟುಕೊಳ್ಳಬೇಕು ಎನ್ನುವ ಮೋಹನ್ ಭಾಗವತ್ ಅವರ ಹೇಳಿಕೆಯ ಹಿಂದಿನ ಉದ್ದೇಶ ಪಾಕಿಸ್ತಾನದಿಂದಲೂ ದೇಣಿಗೆ ಪಡೆಯುವುದೇ?” ಎಂದು ಪ್ರಶ್ನಿಸಿದ್ದಾರೆ.
“ಪಾಕಿಸ್ತಾನದ ಬಗ್ಗೆ ಪ್ರೀತಿ ಹೊಂದಿರುವುದು ನಿಮ್ಮ ಸಂಘದವರೇ ಹೊರತು ಕಾಂಗ್ರೆಸ್ ಅಲ್ಲ. ಅಶೋಕ್ ಅವರು ಸಂಘದವರ ಹೇಳಿಕೆಗಳನ್ನಾದರೂ ಗಮನಿಸುವ ಪ್ರಯತ್ನ ಮಾಡಿದ್ದರೆ, ಇಷ್ಟು ದಡ್ಡತನ ಪ್ರದರ್ಶಿಸುವ ಪ್ರಮೇಯ ಬರುತ್ತಿರಲಿಲ್ಲ” ಎಂದು ಟೀಕಿಸಿದ್ದಾರೆ.
ವಿರೋಧ ಪಕ್ಷದ ನಾಯಕರಿಗೆ ಶಾಖೆಗೆ ಹೋಗಿ ಅಲ್ಲಿ ಕೊಟ್ಟ ಕೋಲನ್ನು ಅಲ್ಲಾಡಿಸಿ ಬರುವುದನ್ನು ಬಿಟ್ಟರೆ, ತಮ್ಮ ಯಜಮಾನರ ಬಗ್ಗೆ ಕನಿಷ್ಠ ತಿಳುವಳಿಕೆಯೂ ಇಲ್ಲ. ಆರೆಸ್ಸೆಸ್ ನವರು ಅಂತಹ ತಿಳುವಳಿಕೆಯನ್ನು ಕೊಟ್ಟೂ ಇಲ್ಲ ಎಂದು ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.
ಅಶೋಕ್ ಅವರಿಗೆ ದೇಶದ ಇತಿಹಾಸವೂ ಗೊತ್ತಿಲ್ಲ, ಆರೆಸ್ಸೆಸ್ ನ ಇತಿಹಾಸವೂ ಗೊತ್ತಿಲ್ಲ ಎಂದು ಟೀಕಿಸಿರುವ ಅವರು, “ಕಾನೂನು ಮತ್ತು ಸಂವಿಧಾನದ ಬಗ್ಗೆ ಈಗಲಾದರೂ ಆರೆಸ್ಸೆಸ್ ಗೆ ಅರಿವು ಮೂಡಿದೆಯಲ್ಲವೇ, ಅಶೋಕಣ್ಣ?” ಎಂದು ಪ್ರಶ್ನಿಸಿದ್ದಾರೆ.
ದೇಶದ ಅತ್ಯಂತ ಶ್ರೀಮಂತ ರಾಜಕೀಯ ಪಕ್ಷ ಬಿಜೆಪಿಯಾಗಿದ್ದು, ಚುನಾವಣಾ ಬಾಂಡ್ಗಳಲ್ಲಿನ ಅಕ್ರಮಗಳ ಕುರಿತು ಕೇಳಲಾದ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ ಎಂದು ಆರೋಪಿಸಿರುವ ಅವರು, “ಉತ್ತರಿಸುವ ಶೌರ್ಯ ನಿಮ್ಮಲ್ಲಿದೆಯೇ?” ಎಂದು ಸವಾಲು ಹಾಕಿದ್ದಾರೆ.
ಬಿಜೆಪಿಯಲ್ಲಿ ನಾಯಕರೆನಿಸಿಕೊಳ್ಳಬೇಕಾದರೆ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಕಾರಬೇಕು, ಪಾಕಿಸ್ತಾನದ ಜಪ ಮಾಡಬೇಕು ಎಂದಿದ್ದ ಅಶೋಕ್ ಅವರು ಈಗ ತಾವೂ ಒಬ್ಬ ನಾಯಕ ಎನಿಸಿಕೊಳ್ಳಲು ಹೊರಟಿದ್ದಾರೆಯೇ? ಅಥವಾ “ವಿಪಕ್ಷ ನಾಯಕ”ನ ಸ್ಥಾನ ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆಯೇ? ಎಂದು ವ್ಯಂಗ್ಯವಾಡಿದ್ದಾರೆ.






