ಸೌಜನ್ಯಾ ಹಂತಕರ ಮಾಹಿತಿ ಹೊಂದಿರುವ ಬಿಜೆಪಿ ನಾಯಕರು ಸತ್ಯ ಬಹಿರಂಗಪಡಿಸಲಿ: ಪ್ರಿಯಾಂಕ್ ಖರ್ಗೆ ಒತ್ತಾಯ

ಬೆಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಸೌಜನ್ಯಾ ಅತ್ಯಾಚಾರ-ಹತ್ಯೆ ಪ್ರಕರಣದ ಆರೋಪಿಗಳ ಬಗ್ಗೆ ಮಾಹಿತಿ ಬಿಜೆಪಿ ನಾಯಕರು ಸತ್ಯವನ್ನು ಬಹಿರಂಗಪಡಿಸಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಒತ್ತಾಯಿಸಿದ್ದಾರೆ.
ಈ ಬಗ್ಗೆ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿರುವ ಪ್ರಿಯಾಂಕ್ ಖರ್ಗೆ, ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ನಳಿನ್ ಕುಮಾರ್ ಕಟೀಲು 2023ರಲ್ಲಿ ಮಾಡಿರುವ ಭಾಷಣದ ವೀಡಿಯೊ ತುಣುಕೊಂದನ್ನು ದಾಖಲೆಯಾಗಿ ಪೋಸ್ಟ್ ಮಾಡಿದ್ದಾರೆ.
"ಸೌಜನ್ಯ ಹಂತಕರ ಬಗ್ಗೆ ಮಾಹಿತಿ ಹೊಂದಿರುವ ಬಿಜೆಪಿ ನಾಯಕರು ಸತ್ಯ ಬಹಿರಂಗಪಡಿಸಲಿ. ಬಿಜೆಪಿ ಶಾಸಕ ಸುನಿಲ್ ಕುಮಾರ್ ಅವರಿಗೆ ಸೌಜನ್ಯಾ ಹತ್ಯೆ ಮಾಡಿದವರು ಯಾರು ಎಂಬ ಮಾಹಿತಿ ಇದೆ ಎಂದು ಸ್ವತಃ ಬಿಜೆಪಿಯ ನಳಿನ್ ಕುಮಾರ್ ಕಟೀಲು 2023ರಲ್ಲಿ ಪಕ್ಷದ ಅಧ್ಯಕ್ಷರು ಹಾಗೂ ಸಂಸದರಾಗಿದ್ದ ಕಾಲದಲ್ಲಿ ಹೇಳಿರುವುದು. ಹಾಗಾಗಿ ಈ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ'' ಎಂದು ಪ್ರಿಯಾಂಕ್ ಹೇಳಿದ್ದಾರೆ.
''ಸೌಜನ್ಯಾ ಹಂತಕರ ಬಗ್ಗೆ ಬಿಜೆಪಿಯವರಿಗೆ ಮಾಹಿತಿ ಇದ್ದರೂ ಅಂದಿನಿಂದ ಇಂದಿನವರೆಗೂ ಗೌಪ್ಯವಾಗಿ ಇಟ್ಟಿರುವುದೇಕೆ? ಈಗಲೂ ಎಸ್ಐಟಿ ಮುಂದೆ ಮಾಹಿತಿ ನೀಡಲು ಮುಕ್ತ ಅವಕಾಶವಿದೆ. ಸೌಜನ್ಯಾ ಹಂತಕರ ಬಗ್ಗೆ ಮಾಹಿತಿ ನೀಡುವ ಬಿಜೆಪಿ ನಾಯಕರಿಗೆ ರಕ್ಷಣೆ ಒದಗಿಸುವುದು ನಮ್ಮ ಸರ್ಕಾರದ ಜವಾಬ್ದಾರಿ'' ಎಂದಿರುವ ಪ್ರಿಯಾಂಕ್ ಖರ್ಗೆ, " ಬಿಜೆಪಿಯವರು ಸೌಜನ್ಯಾ ಹತ್ಯೆಗೆ ನ್ಯಾಯ ಒದಗಿಸುವ ತಮ್ಮ ವಾಗ್ದಾನವನ್ನು ನೆನಪು ಮಾಡಿಕೊಳ್ಳಲಿ, ಹಂತಕರ ಬಗ್ಗೆ ತಮಗಿರುವ ಮಾಹಿತಿ ಬಹಿರಂಗಪಡಿಸಿ ತಮ್ಮ ಬದ್ಧತೆಯನ್ನು ನಿರೂಪಿಸಲಿ'' ಎಂದು ಒತ್ತಾಯಿಸಿದ್ದಾರೆ.







