ಅಡ್ಡ ಮತದಾನ; ಧರ್ಮಸ್ಥಳದಲ್ಲಿ ಶೀಘ್ರವೇ ಬಿಜೆಪಿ ಶಾಸಕಾಂಗ ಪಕ್ಷದ ಸಭೆ: ವಿಜಯೇಂದ್ರ

PC: x.com/BYVijayendra
ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿನ ಅಡ್ಡ ಮತದಾನದ ಆರೋಪ ಕುರಿತಂತೆ ಅತಿ ಶೀಘ್ರದಲ್ಲೇ ಧರ್ಮಸ್ಥಳದ ಶ್ರೀ ಕ್ಷೇತ್ರದಲ್ಲಿ ನಮ್ಮ ಶಾಸಕಾಂಗ ಪಕ್ಷದ ಸಭೆ ಕರೆಯಲು ನಿರ್ಧರಿಸಿರುವುದಾಗಿ ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಪಕ್ಷ ನಾಯಕ ಆರ್.ಅಶೋಕ್ ಅವರಿಗ ಸಭೆ ಕರೆಯುವ ಸಂಬಂಧ ಮಾತನಾಡುವೆ; ನಾವೆಲ್ಲರೂ ದೇವರನ್ನು ನಂಬುವವರು. ಧರ್ಮಸ್ಥಳದಲ್ಲಿ ಸಭೆ ಕರೆದು ತಾಯಿಗೆ ದ್ರೋಹ ಮಾಡಿದ ಶಾಸಕರ ಮತ್ತು ಸತ್ಯದ ಬಗ್ಗೆ ಗೊತ್ತಾಗಬೇಕಿದೆ. ಶ್ರೀ ಕ್ಷೇತ್ರದಲ್ಲಿ ತೀರ್ಮಾನ ಆಗಬೇಕೆಂದು ನಿರ್ಧಾರ ಮಾಡಿದ್ದೇನೆ ಎಂದು ಹೇಳಿದರು.
ಕಾರ್ಯಕರ್ತರಿಗೆ ನೋವಾಗುವುದು ಸಹಜ. ಅಡ್ಡ ಮತದಾನವನ್ನು ನನ್ನ ಮನಸಾಕ್ಷಿ ಒಪ್ಪುತ್ತಿಲ್ಲ; ಸಾಮಾಜಿಕ ಜಾಲತಾಣದಲ್ಲಿ ಬರುತ್ತಿರುವ ಟೀಕೆಗಳ ಬಗ್ಗೆ ನಾನು ಕೂಡ ಗಮನಿಸಿದ್ದೇನೆ. ಇದನ್ನೇ ನೆಪ ಮಾಡಿಕೊಂಡು ಪರೋಕ್ಷ ದಾಳಿ ಮಾಡುವ ಕೆಲಸ ಹಾಗೂ ಕುತಂತ್ರ ನಡೆಯುತ್ತಿದೆ. ಆದ್ದರಿಂದ ಈ ಸಂಬಂಧ ಸತ್ಯಾಸತ್ಯತೆಯನ್ನು ನಾವು ಜನರ ಮುಂದಿಡಬೇಕಾಗಿದೆ. ಪಕ್ಷದ ಗೌರವ ಉಳಿಸಬೇಕಿದೆ. ಕಾರ್ಯಕರ್ತರಿಗೆ ನೆಮ್ಮದಿ ನೀಡಬೇಕಿದೆ ಎಂದು ವಿಜಯೇಂದ್ರ ಹೇಳಿದರು.
ಮೊನ್ನೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯಿಂದಲೂ 4 ಅಡ್ಡ ಮತದಾನ ಆಗಿರುವ ಬಗ್ಗೆ ಚರ್ಚೆ ಮಾಧ್ಯಮಗಳಲ್ಲಿ ನಡೆಯುತ್ತಿದೆ. ಪತ್ರಿಕೆಗಳಲ್ಲೂ ಬಂದಿವೆ. ಸಾಮಾಜಿಕ ಜಾಲತಾಣದಲ್ಲೂ ಅತಿ ಹೆಚ್ಚು ಚರ್ಚೆ ಆಗುತ್ತಿವೆ. ರಾಜ್ಯದಲ್ಲಿ ನಮ್ಮ ಕಾರ್ಯಕರ್ತರು ನಮ್ಮ ಶಾಸಕರ ನಡವಳಿಕೆ ಬಗ್ಗೆ ಬಹಳ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿಯ 63 ಶಾಸಕರ ಬಗ್ಗೆ ಅನುಮಾನ ಹುಟ್ಟುವಂತಾಗಿದೆ ಎಂದು ತಿಳಿಸಿದರು.
ಪಕ್ಷದ ರಾಜ್ಯಾಧ್ಯಕ್ಷನಾಗಿ ಈ ಬೆಳವಣಿಗೆ ನನಗೂ ಸಾಕಷ್ಟು ಬೇಸರ ತಂದಿದೆ. ನಾನು ಬೆಳಗ್ಗೆ 3 ಗಂಟೆಗೇ ಎದ್ದು ಕೂತಿದ್ದೇನೆ. ಇದನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಬೇಕೆಂಬ ವಿಚಾರವನ್ನು ಮುಂದಿಟ್ಟುಕೊಂಡು ನಿನ್ನೆ ಬೆಳಗ್ಗೆ 7 ಗಂಟೆಗೆ ರಾಷ್ಟ್ರೀಯ ಅಧ್ಯಕ್ಷರಿಗೆ ದೂರವಾಣಿ ಕರೆ ಮಾಡಿದ್ದೇನೆ. ಅಲ್ಲದೇ, ನಾನು ಮತ್ತು ಆರ್.ಅಶೋಕ್ ದಿಲ್ಲಿಗೆ ಹೋಗಲಿದ್ದೇವೆ. ಮತ್ತೊಂದು ಕಡೆ ಸತ್ಯಶೋಧನಾ ಸಮಿತಿ ಕೂಡಾ ಮಾಡಿದ್ದೇವೆ. ಸಿ.ಟಿ.ರವಿ, ಮಹೇಶ್ ಟೆಂಗಿನಕಾಯಿ, ಮಾಜಿ ಸಚಿವ ಕೊಳ್ಳೇಗಾಲ ಮಹೇಶ್ ಈ ಸಮಿತಿಯಲ್ಲಿದ್ದಾರೆ ಎಂದರು.
ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮದು ರಾಷ್ಟ್ರೀಯ ಪಕ್ಷ. ನಾವು ಶಾಸಕರಾಗಿ ಗೆಲ್ಲಲು ಪಕ್ಷದ ಆಶೀರ್ವಾದವಿದೆ. ಕಾರ್ಯಕರ್ತರ ಪರಿಶ್ರಮವೂ ಇದೆ. ಇದರಿಂದ ಕಾರ್ಯಕರ್ತರಿಗೆ ಆಘಾತ, ನೋವಾಗಿದೆ. ಮತದಾರರು ಇವತ್ತು ನರೇಂದ್ರ ಮೋದಿಯವರನ್ನು ನೋಡಿಕೊಂಡು ಮತ ಕೊಟ್ಟಿದ್ದಾರೆ. ನಮ್ಮ ಯೋಗ್ಯತೆ ಒಂದು ಕಡೆ ಬದಿಗಿಡಿ. ಶಾಸಕರು ಯಾರೆಷ್ಟೇ ದೊಡ್ಡವರಾಗಿದ್ದರೂ ಗೌಪ್ಯ ಮತದಾನ ನಡೆದ ಕಾರಣ ನನ್ನನ್ನೂ ಸೇರಿ 63 ಶಾಸಕರನ್ನೂ ಅನುಮಾನ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು. ಪುಕ್ಸಟ್ಟೆ ಮತ ಹಾಕಿರಲು ಸಾಧ್ಯ ಇಲ್ಲ ಎಂದರು.
ಜಿಪಂ, ತಾಪಂ ಚುನಾವಣೆಯಲ್ಲಿ ಗೆದ್ದು ತೋರಿಸಲಿ:
ಬಿಜೆಪಿಯಲ್ಲಿ ಆಮೂಲಾಗ್ರ ಬದಲಾವಣೆ ಆಗಬೇಕು; ವಿಪಕ್ಷ ನಾಯಕನ ಸ್ಥಾನವನ್ನು ಯತ್ನಾಳ್ ರಿಗೆ ಕೊಡಬೇಕೆಂಬ ಕುಮಾರ್ ಬಂಗಾರಪ್ಪರ ಹೇಳಿಕೆ ಕುರಿತಂತೆ ಪತ್ರಕರ್ತರು ಗಮನಸೆಳೆದರು. ಯಾರಿಗೆ ಏನು ಉತ್ತರ ಕೊಡಬೇಕೋ ಕೊಡುತ್ತೇನೆ. ಪುಕ್ಸಟ್ಟೆ ಹೇಳಿಕೆ ಕೊಡುವವರು ತಮ್ಮ ಕ್ಷೇತ್ರದಲ್ಲಿ ಜಿಲ್ಲಾ ಪಂಚಾಯತ್ ಚುನಾವಣೆಗೆ ಬಂದು ನಿಂತುಕೊಳ್ಳಲಿ. ವಿಧಾನಸಭಾ ಚುನಾವಣೆ ದೂರದ ಮಾತು. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಯಲ್ಲಿ ನಿಂತು ಗೆದ್ದು ತೋರಿಸಲಿ. ಆಮೇಲೆ ಅದರ ಬಗ್ಗೆ ಮಾತನಾಡುವೆ ಎಂದು ಸವಾಲೆಸೆದರು.






