ನಾಗಮಂಗಲ ಗಲಾಟೆ ಪ್ರಕರಣ | ಡಾ.ಅಶ್ವತ್ಥ್ ರಾಯಣ್ ನೇತೃತ್ವದಲ್ಲಿ ‘ಬಿಜೆಪಿ ಸತ್ಯ ಶೋಧನಾ ಸಮಿತಿ’
ಡಾ.ಅಶ್ವತ್ಥ್ ನಾರಾಯಣ್
ಬೆಂಗಳೂರು : ದಲಿತರನ್ನು ಮತ್ತು ಹಿಂದೂಗಳನ್ನು ಹತ್ತಿಕ್ಕುವ ಸರಕಾರ ರಾಜ್ಯದಲ್ಲಿದೆ. ಈ ಸರಕಾರದ ನಡೆನುಡಿ ಬಗ್ಗೆ ಕೂಡಲೇ ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕು ಎಂದು ಪರಿಷತ್ ಸದಸ್ಯ ಎನ್.ರವಿಕುಮಾರ್ ಆಗ್ರಹಿಸಿದರು.
ನಾಗಮಂಗಲ ಗಲಭೆ ಪ್ರಕರಣ ಸಂಬಂಧ ಬಿಜೆಪಿ ವತಿಯಿಂದ ಮಾಜಿ ಡಿಸಿಎಂ ಡಾ.ಅಶ್ವತ್ಥ್ ನಾರಾಯಣ್ ನೇತೃತ್ವದಲ್ಲಿ ಬೈರತಿ ಬಸವರಾಜ್, ಭಾಸ್ಕರ ರಾವ್, ನಾರಾಯಣಗೌಡರನ್ನು ಒಳಗೊಂಡ ಸತ್ಯ ಶೋಧನಾ ಸಮಿತಿ ರಚಿಸಲಾಗಿದೆ. ನಿನ್ನೆ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್ ನಾಗಮಂಗಲಕ್ಕೆ ತೆರಳಿ ನೋಡಿಕೊಂಡು ಬಂದಿದ್ದಾರೆ ಎಂದರು.
ಗಣಪತಿ ವಿಸರ್ಜನೆಗೆ ತೆರಳುವ ಮೆರವಣಿಗೆಯ ಮೇಲೆ ಒಂದು ಸಮುದಾಯದವರು ಕಲ್ಲುಗಳನ್ನು ಎಸೆದಿದ್ದಾರೆ. ಮಸೀದಿಯಲ್ಲಿ ಕಲ್ಲುಗಳು ಹೇಗೆ ಬಂದವು? ಲಾಂಗುಗಳು, ಪೆಟ್ರೋಲ್ ಬಾಂಬ್ ಹೇಗೆ ಬಂದವು?. ಪೆಟ್ರೋಲ್ ಬಾಂಬ್ ಎಸೆದು ಅಂಗಡಿಗಳನ್ನು ಸುಟ್ಟು ಹಾಕಿದ್ದಾರೆ. ಸುಮಾರು 40ಕ್ಕೂ ಹೆಚ್ಚು ಅಂಗಡಿಗಳು ಸುಟ್ಟು ಭಸ್ಮವಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಗೃಹ ಸಚಿವರು ಇದೊಂದು ಸಣ್ಣ ಘಟನೆ ಎಂದಿದ್ದಾರೆ. ಸಿದ್ದರಾಮಯ್ಯನವರು ಇದರ ಕುರಿತು ಚಕಾರ ಎತ್ತುತ್ತಿಲ್ಲ. ಸಿಎಂ ಈ ಘಟನೆ ಬಗ್ಗೆ ಗಮನ ಕೊಡಬೇಕು. ಕೇವಲ ಹಿಂದೂಗಳನ್ನು ಮಾತ್ರ ಎ 1, ಎ 2 (ಮೊದಲನೇ ಆರೋಪಿ, ಎರಡನೇ ಆರೋಪಿ) ಮಾಡುತ್ತಿದ್ದಾರೆ. ಈ ಸರಕಾರಕ್ಕೆ ಮಾನ, ಮರ್ಯಾದೆ ಇಲ್ಲ. ಈ ಸರಕಾರ ಬರಲು ಹಿಂದೂಗಳು ಮತ ಹಾಕಿದ್ದಾರಾ? ಇಲ್ಲವೇ ಎಂದು ಕೇಳಿದರು.