ಆರೆಸ್ಸೆಸ್ ಕುರಿತ ಅಂಚೆ ಚೀಟಿ, ನಾಣ್ಯ ಬಿಡುಗಡೆ | ಮೋದಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಲಿ : ಬಿ.ಕೆ.ಹರಿಪ್ರಸಾದ್

ಬೆಂಗಳುರು : ಸಾಂವಿಧಾನಿಕ ಹುದ್ದೆಯಲ್ಲಿದ್ದೂ, ಸಂವಿಧಾನ ವಿರೋಧಿ ಸಂಘಟನೆಯ ಪ್ರಚಾರ ನಡೆಸುವುದು ಪ್ರಧಾನಿ ಹುದ್ದೆಗೆ ಶೋಭೆಯಲ್ಲ. ಕೂಡಲೇ ಪ್ರಧಾನಿ ನರೇಂದ್ರ ಮೋದಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಆರೆಸ್ಸೆಸ್ ಸಂಘಟನೆಯ ಪ್ರಚಾರ ಪ್ರಮುಖ್ ಜವಾಬ್ದಾರಿ ವಹಿಸಿಕೊಳ್ಳಲಿ ಎಂದು ಬಿ.ಕೆ.ಹರಿಪ್ರಸಾದ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಆರೆಸ್ಸೆಸ್ ನೂರು ವರ್ಷದ ನೆನಪಿಗೆ ಪ್ರಧಾನ ಮಂತ್ರಿಗಳು ಅಂಚೆ ಚೀಟಿ ಹಾಗೂ ನಾಣ್ಯ ಬಿಡುಗಡೆ ಮಾಡಿರುವುದು ಸಂವಿಧಾನಕ್ಕೆ ಬಗೆದ ದ್ರೋಹ ಹಾಗೂ ಇತಿಹಾಸಕ್ಕೆ ಮಾಡಿದ ಅಪಚಾರ. ಸ್ವತಂತ್ರ ಚಳುವಳಿಯ ವಿರೋಧಿಯಾಗಿದ್ದ ಆರೆಸ್ಸೆಸ್ ಸಂವಿಧಾನ ವಿರೋಧಿ ಚಟುವಟಿಕೆಯಲ್ಲಿ ನೂರು ವರ್ಷದಿಂದಲೂ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದಿದ್ದಾರೆ.
ದೇಶದ ಸೌಹಾರ್ದತೆ, ಐಕ್ಯತೆ, ಪ್ರಜಾಪ್ರಭುತ್ವ ಹಾಗೂ ಜಾತ್ಯಾತೀತ ಆಶಯಗಳಿಗೆ ಸಂಘಪರಿವಾರ ಮಾಡಿರುವ ಗಾಯಗಳಿಗೆ ಲೆಕ್ಕವಿಲ್ಲ. ಭಾರತದ ಸಂವಿಧಾನದ ಬದಲು ಮನುಸ್ಮೃತಿಯನ್ನು ಜಾರಿ ಮಾಡಲು ಹೊರಟಿರುವ ಮನುವಾದಿ ಸಂಘಟನೆಯನ್ನು ಪ್ರಧಾನಿ ಹುದ್ದೆಯಲ್ಲಿದ್ದು ಪ್ರಚಾರ ನಡೆಸುವುದು ಅಕ್ಷಮ್ಯ ಎಂದು ಹರಿಪ್ರಸಾದ್ ಟೀಕಿಸಿದ್ದಾರೆ.
ಕೋಮುದ್ವೇಷ, ಕೊಲೆ, ಪಿತೂರಿ, ಸಮಾಜದ ಸ್ವಾಸ್ಥ್ಯವನ್ನೇ ಹಾಳುಗೆಡವುತ್ತಿರುವ ಸಂಘಟನೆಯ ಶತಮಾನೋತ್ಸದಲ್ಲಿ ಅಂಚೆ ಹಾಗೂ ನಾಣ್ಯ ಬಿಡುಗಡೆ ಮಾಡಿದ್ದು ಯಾವ ಪುರುಷರ್ಥಕ್ಕಾಗಿ? 1963ರಲ್ಲಿ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿರುವ ಸಂಘದ ಚಿತ್ರವನ್ನು ಅಂಚೆಯಲ್ಲಿ ಹಾಕಿರುವುದು ಇತಿಹಾಸದ ವ್ಯಂಗ್ಯ, ಸಂಘ ಸುಳ್ಳನ್ನೇ ಸತ್ಯವನ್ನಾಗಿಸುವ ವ್ಯರ್ಥ ಪ್ರಯತ್ನವಷ್ಟೇ ಎಂದು ಹರಿಪ್ರಸಾದ್ ತಿಳಿಸಿದ್ದಾರೆ.
ನಾಣ್ಯದಲ್ಲಿ ಆರೆಸ್ಸೆಸ್ ಪ್ರತಿಪಾದಿಸುವ ಭಾಗವ ಧ್ವಜವನ್ನು ಸೇರಿಸುವ ಮೂಲಕ ಸಂವಿಧಾನದ ಧರ್ಮನಿರಪೇಕ್ಷ ಸಿದ್ಧಾಂತವನ್ನು ಅವಮಾನಿಸಿದೆ. ಇಂತಹ ಕೃತ್ಯಗಳನ್ನ ಬಲವಾಗಿ ಖಂಡಿಸಿ, ಸಂವಿಧಾನ ವಿರೋಧಿ ಶಕ್ತಿಗಳನ್ನು ಮಟ್ಟ ಹಾಕಬೇಕಿದೆ ಎಂದು ಹರಿಪ್ರಸಾದ್ ಹೇಳಿದ್ದಾರೆ.







