ಜೂ.21ಕ್ಕೆ ಕೆಪಿಸಿಸಿ ಅಧ್ಯಕ್ಷರಾಗಿ ಬಿ.ಕೆ.ಹರಿಪ್ರಸಾದ್ ಪದಗ್ರಹಣ

ಬೆಂಗಳೂರು : ವಿಧಾನ ಪರಿಷತ್ತಿನ ಸದಸ್ಯ, ಕಾಂಗ್ರೆಸ್ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಜೂ.21ಕ್ಕೆ ಅಧಿಕಾರ ಸ್ವೀಕಾರ ಮಾಡಲಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾಗಿ ನೇಮಕಗೊಂಡ ಬಿ.ಕೆ.ಹರಿಪ್ರಸಾದ್ ಅವರು ಮೊದಲ ಬಾರಿಗೆ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದರು. ಈ ವೇಳೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಅವರನ್ನು ಅದ್ದೂರಿಯಾಗಿ ಬರಮಾಡಿಕೊಂಡರು. ವಿಧಾನ ಪರಿಷತ್ತಿನ ಆಡಳಿತ ಪಕ್ಷದ ಮುಖ್ಯ ಸಚೇತಕ ಸಲೀಂ ಅಹ್ಮದ್, ಮಾಜಿ ಸಚಿವರಾದ ಝಮೀರ್ ಅಹ್ಮದ್ ಖಾನ್, ಬಿ.ನಾಗೇಂದ್ರ, ವಿಧಾನ ಪರಿಷತ್ತಿನ ಸದಸ್ಯ ನಸೀರ್ ಅಹ್ಮದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜಿ.ಸಿ.ಚಂದ್ರಶೇಖರ್, ಕೆಪಿಸಿಸಿ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್ ಅವರು ಜೂ.21 ಕ್ಕೆ ಪದಗ್ರಹಣ ಮಾಡಲಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಇಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ಅಧಿಕೃತವಾಗಿ ಸ್ವೀಕಾರ ಮಾಡಲಿದ್ದಾರೆ ಎಂದು ಹೇಳಿದರು.
ಹಿರಿಯ ಹಾಗೂ ರಾಜಕೀಯ ಮುತ್ಸದಿಯಾಗಿರುವ ಬಿ.ಕೆ.ಹರಿಪ್ರಸಾದ್ ಅವರನ್ನು ಕಾಂಗ್ರೆಸ್ ಪಕ್ಷದ ರಾಜ್ಯ ಅಧ್ಯಕ್ಷರಾಗಿ ಆಯ್ಕೆ ಮಾಡಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಹರಿಪ್ರಸಾದ್ ಅವರು ಅನುಭವಿ ಜೋಡಿಯಾಗಿದ್ದು, ಇವರ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾರ್ಗದರ್ಶನ ಇರಲಿದೆ. 2028ರ ವಿಧಾನಸಭಾ ಚುನಾವಣೆಯನ್ನು ಮೂವರ ನೇತೃತ್ವದಲ್ಲಿ ಎದುರಿಸಿ ಮತ್ತೆ ಅಧಿಕಾರಕ್ಕೆ ಬರಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.






