ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆದ ಕೃತ್ಯ ಖಂಡನೀಯ : ಬಿ.ಕೆ.ಹರಿಪ್ರಸಾದ್

ಬೆಂಗಳೂರು : ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಅವರ ಮೇಲೆ ಸಾರ್ವಜನಿಕವಾಗಿ ವಿರೋಧ ಪಕ್ಷದವರು ಚಪ್ಪಲಿ ಎಸೆದು ನಡೆಸಿರುವ ಕೃತ್ಯವನ್ನು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ತೀವ್ರವಾಗಿ ಖಂಡಿಸಿದ್ದಾರೆ.
ಶನಿವಾರ ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಹರಿಪ್ರಸಾದ್, ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳು ಸಹಜ. ಆದರೆ ವಾದದಿಂದ ಎದುರಿಸಲಾಗದವರು, ಪ್ರಜಾಪ್ರಭುತ್ವದ ಭಾಷೆಯಲ್ಲಿ ಉತ್ತರಿಸಲು ಸಾಧ್ಯವಾಗದವರು ಮಾತ್ರ ಇಂತಹ ಹೇಯ ಮತ್ತು ಹೇಡಿತನದ ಕೃತ್ಯಗಳಿಗೆ ಇಳಿಯುತ್ತಾರೆ ಎಂದು ಟೀಕಿಸಿದ್ದಾರೆ.
ಭಿನ್ನಮತವನ್ನು ಹಿಂಸೆ, ಬೆದರಿಕೆ ಮತ್ತು ಅವಮಾನದಿಂದ ಹತ್ತಿಕ್ಕಲು ಹೊರಟಿರುವ ರಾಜಕೀಯ ಸಂಸ್ಕೃತಿಗೆ ಕರ್ನಾಟಕದಲ್ಲಿ ಯಾವುದೇ ಸ್ಥಾನವಿಲ್ಲ. ಜನರ ತೀರ್ಪಿಗೆ ಗೌರವ ಕೊಡುವ ಪ್ರಜಾಪ್ರಭುತ್ವದಲ್ಲಿ ಇಂತಹ ದುಷ್ಕೃತ್ಯಗಳಿಗೆ ಯಾವುದೇ ಸಮರ್ಥನೆ ಇಲ್ಲ. ಪ್ರದೀಪ್ ಈಶ್ವರ್ ಎದೆಗುಂದಬೇಕಿಲ್ಲ. ಕಾಂಗ್ರೆಸ್ ಪಕ್ಷ ನಿಮ್ಮೊಂದಿಗೆ ದೃಢವಾಗಿ ನಿಂತಿದೆ. ಸತ್ಯ, ಪ್ರಜಾಪ್ರಭುತ್ವ ಮತ್ತು ಜನರ ಪರವಾದ ಧ್ವನಿಯನ್ನು ಇಂತಹ ಕೃತ್ಯಗಳಿಂದ ಯಾರೂ ಮೌನಗೊಳಿಸಲು ಸಾಧ್ಯವಿಲ್ಲ’ ಎಂದು ಹರಿಪ್ರಸಾದ್ ತಿಳಿಸಿದ್ದಾರೆ.






