ನೈಜ ಇತಿಹಾಸವನ್ನು ಯುವ ಪೀಳಿಗೆಗೆ ತಲುಪಿಸುವುದು ಅಗತ್ಯ : ಬಿ.ಕೆ.ಹರಿಪ್ರಸಾದ್

ಬೆಂಗಳೂರು : ದೇಶದ ನಿಜವಾದ ಇತಿಹಾಸ, ಸ್ವಾತಂತ್ರ್ಯ ಹೋರಾಟದ ಹಾದಿ ಹಾಗೂ ವೈವಿಧ್ಯತೆಯನ್ನು ಇಂದಿನ ಯುವ ಪೀಳಿಗೆಗೆ ತಲುಪಿಸುವುದು ಅತ್ಯಗತ್ಯ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ತಿಳಿಸಿದ್ದಾರೆ.
ರವಿವಾರ ನಗರದ ಗಾಂಧಿಭವನ ಆಗಸ್ಟ್ ಕ್ರಾಂತಿ ಟ್ರಸ್ಟ್, ಕರ್ನಾಟಕ ಮತ್ತು ಗಾಂಧಿ ಸ್ಮಾರಕ ಸಮಿತಿ ವತಿಯಿಂದ ಆಯೋಜಿಸಿದ್ದ ‘ಆಗಸ್ಟ್ ಕ್ರಾಂತಿ ದಿವಸ ಆಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದ ಪರಿಕಲ್ಪನೆ ಎನ್ನುವುದು 580ಕ್ಕೂ ಹೆಚ್ಚು ರಾಜ-ಮಹಾರಾಜರ ಆಡಳಿತದಲ್ಲಿದ್ದ ಪ್ರದೇಶಗಳನ್ನು ಒಗ್ಗೂಡಿಸಿ ನಿರ್ಮಿಸಿದ ದೇಶ. ಸ್ವತಂತ್ರ ಹೋರಾಟದ ನಿರ್ಣಾಯಕ ಹಂತಗಳಾದ 1920ರ ಅಸಹಕಾರ ಚಳವಳಿ, 1930ರ ಉಪ್ಪಿನ ಸತ್ಯಾಗ್ರಹ ಹಾಗೂ 1942ರ 'ಕ್ವಿಟ್ ಇಂಡಿಯಾ' (ಭಾರತ ಬಿಟ್ಟು ತೊಲಗಿ) ಆಂದೋಲನಗಳಲ್ಲಿ ಆರೆಸ್ಸೆಸ್ ಅಥವಾ ಹಿಂದುತ್ವ ಪರ ಸಂಘಟನೆಗಳು ಪಾಲ್ಗೊಳ್ಳಲಿಲ್ಲ. 1920ರಲ್ಲಿ ಮಹಾತ್ಮ ಗಾಂಧಿಯವರು ಖಿಲಾಫತ್ ಆಂದೋಲನವನ್ನು ಬೆಂಬಲಿಸಿದಾಗ ಅದನ್ನು ವಿರೋಧಿಸಿ ಕೆ.ಬಿ.ಹೆಡಗೇವಾರ್ ಅವರು ಕಾಂಗ್ರೆಸ್ ತೊರೆದು 1925ರಲ್ಲಿ ಆರೆಸ್ಸೆಸ್ ಸ್ಥಾಪಿಸಿದರು ಎಂದು ಅವರು ಹರಿಪ್ರಸಾದ್ ತಿಳಿಸಿದರು.
ಕ್ವಿಟ್ ಇಂಡಿಯಾ ಚಳವಳಿಯ ಸಂದರ್ಭದಲ್ಲಿ ಕಾಂಗ್ರೆಸ್‍ನ ಎಲ್ಲ ಪ್ರಮುಖ ನಾಯಕರನ್ನು ಜೈಲಿಗಟ್ಟಿದಾಗ, ಜನಸಾಮಾನ್ಯರು ಮತ್ತು ಕಾರ್ಮಿಕರು ಹೋರಾಟವನ್ನು ಮುನ್ನಡೆಸಿದರು. ಆದರೆ, ಜೈಲಿನಲ್ಲಿದ್ದ ಗಾಂಧೀಜಿ, ನೆಹರೂ ಅವರಂತಹ ನಾಯಕರನ್ನು ಬಿಟ್ಟು, ಹೋರಾಟದಿಂದ ದೂರ ಉಳಿದವರನ್ನು ವೈಭವೀಕರಿಸುವ ಕೆಲಸ ವಾಟ್ಸಾಪ್ ಯೂನಿವರ್ಸಿಟಿಗಳ ಮೂಲಕ ನಡೆಯುತ್ತಿದೆ. ಯುವಕರಿಗೆ ನಿಜವಾದ ಇತಿಹಾಸ ತಲುಪದಿದ್ದರೆ ಸುಳ್ಳನ್ನೇ ಸತ್ಯ ಎಂದು ನಂಬುವ ಅಪಾಯವಿದೆ ಎಂದು ಅವರು ಎಚ್ಚರಿಸಿದರು.
ಭಾರತ ವಿಶ್ವದಲ್ಲೇ ಅತ್ಯಂತ ಅದ್ಭುತವಾದ ದೇಶ. ಇಲ್ಲಿ 3 ಪ್ರಮುಖ ನಾಗರಿಕತೆಗಳು, 22 ಅಧಿಕೃತ ಭಾಷೆಗಳು, 19 ಸಾವಿರಕ್ಕೂ ಹೆಚ್ಚು ಆಡುಭಾಷೆಗಳು ಹಾಗೂ ಅಪಾರ ಸಾಂಸ್ಕೃ ತಿಕ ವೈವಿಧ್ಯತೆ ಇದೆ. ಈ ವೈವಿಧ್ಯತೆಯನ್ನು ಕಾಪಾಡಿಕೊಂಡು ಮುಂದಿನ ಪೀಳಿಗೆಗೆ ದೇಶದ ನೈಜ ಇತಿಹಾಸವನ್ನು ತಲುಪಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹರಿಪ್ರಸಾದ್ ಪ್ರತಿಪಾದಿಸಿದರು.
ಕರ್ನಾಟಕ ಜನಶಕ್ತಿ ರಾಜ್ಯಾಧ್ಯಕ್ಷ ನೂರ್ ಶ್ರೀಧರ್ ಮಾತನಾಡಿ, ಕೇಂದ್ರದಲ್ಲಿ ಪ್ರಜಾಸತ್ತಾತ್ಮಕ ಸರಕಾರವಿಲ್ಲ. ಅಲ್ಲಿರುವುದು ಸರ್ವಾಧಿಕಾರಿ ಪಿಶಾಚಿ. ಮುಂದಿನ ಬಾರಿಗೆ ಚುನಾವಣೆಯಲ್ಲಿ ಸೋಲುತ್ತಾರೆಂದು ಗೊತ್ತಿರುವದರಿಂದ ಅವರು ಅಧಿಕಾರ ಬಿಡಬಾರದೆಂದು ತೀರ್ಮಾನ ಮಾಡಿದ್ದಾರೆ. ಚುನಾವಣೆ ನಡೆದರೆ ಗೆಲ್ಲಬೇಕು, ಇಲ್ಲದಿದ್ದರೆ ಚುನಾವಣೆಯೇ ನಡೆಯಬಾರದೆನ್ನುವ ತೀರ್ಮಾನ ಮಾಡಿದ್ದಾರೆ. ಹಾಗಾಗಿಯೇ ಅವರು ಚುನಾವಣಾ ಆಯುಕ್ತರನ್ನೇ ಬದಲಾಯಿಸಿದ್ದು, ಇವಿಎಂಗಳನ್ನು ಸಿದ್ದಪಡಿಸಿಕೊಂಡಿರುವುದು, ಎಸ್‍ಐಆರ್ ತಂದಿರುವುದು. ಡಿಲಿಮಿಟೇಶನ್, ಒಂದೇ ರಾಷ್ಟ್ರ ಒಂದೇ ಚುನಾವಣೆ ತರಲು ಹೊರಟಿರುವುದು ಎಂದು ಹೇಳಿದರು.
ಇದೆಲ್ಲ ಮಾಡಿಯೂ ಅವರು ಯಶಸ್ಸು ಆಗಿಲ್ಲವೆಂದರೆ ಪ್ಲಾನ್ ಬಿ ಅನ್ನು ಸಿದ್ದಪಡಿಸಿಕೊಂಡಿದ್ದಾರೆ. ಅದೇ ಸುಳ್ಳಿನ ಜನಗಣತಿ. ಆ ಮೂಲಕ ಅವರು ದೇಶದಲ್ಲಿ ಅಲ್ಪಸಂಖ್ಯಾತರ ಸಂಖ್ಯೆ ಹೆಚ್ಚಾಗಿದೆ, ಎಲ್ಲ ವ್ಯಾಪಾರಗಳು ಅವರ ಕೈಯಲ್ಲಿದೆ, ಹಿಂದೂ ಸಮಾಜ ಕುಸಿದು ಹೋಗುತ್ತಿದೆ ಎಂದು ಹೇಳುತ್ತಾ, ಗಲಭೆಗಳ ಮೂಲಕ 2028ರಲ್ಲಿ ರಕ್ತಪಾತವಾನ್ನು ಸೃಷ್ಟಿಸುವ ಯೋಜನೆಗಳನ್ನು ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಅಂತಹ ಪರಿಸ್ಥಿತಿ ಬರೋದಕ್ಕಿಂತ ಮೊದಲೇ ನಾವು ಕ್ವಿಟ್ ಇಂಡಿಯಾ ಪರಂಪರೆಯನ್ನು ಪುನರಾವರ್ತನೆ ಮಾಡಿಕೊಂಡು ವಿರೋಧ ಮಾಡುವ ಶಕ್ತಿಗಳೆಲ್ಲರೂ ಒಂದಾಗಿ, ದೊಡ್ಡ ಶಕ್ತಿಯಾಗಿ ಬೆಳಿಯಬೇಕು. ಜನಚಳುವಳಿಗಳು ಮತ್ತು ಕಾಂಗ್ರೆಸ್ನು ಒಳಗೊಂಡಂತೆ ಜಾತ್ಯಾತಿತ ಪಕ್ಷಗಳು ಸೇರಿ ಕೆಲಸ ಮಾಡಬೇಕಿದೆ. ಆದಷ್ಟು ಬೇಗ ಸಕಲ ತಯಾರಿಗಳೊಂದಿಗೆ ‘ಸಂವಿಧಾನ ವಿರೋಧಿಗಳೇ ಅಧಿಕಾರ ಬಿಟ್ಟು ತೊಲಗಿ’ ಎನ್ನುವ ಕರೆಯನ್ನು ದೇಶದೊಳಗೆ ನೀಡಬೇಕಿದೆ ಎಂದು ನೂರ್ ಶ್ರೀಧರ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ರೈತ ಹೋರಾಟಗಾರ ಬಡಗಲಪುರ ನಾಗೇಂದ್ರ, ವಿಚಾರವಾದಿಗಳ ಟ್ರಸ್ಟ್‍ನ ನಾಗೇಶ್ ಅರಳಕುಪ್ಪೆ, ಕೃಷಿ ತಜ್ಞ ಡಾ.ಪ್ರಕಾಶ್ ಕಮ್ಮರಡಿ, ಹೋರಾಟಗಾರರಾದ ಅಪ್ಪಾ ಸಾಹೇಬ ಯರನಾಳ, ಅಶೋಕ ದಳವಾಯಿ, ಜ್ಯೋತಿ ಸೇರಿದಂತೆ ಹಲವರು ಭಾಗವಹಿಸಿದ್ದರು.






