ಸಾಮಾಜಿಕ ನ್ಯಾಯ ನೀಡುವ ಸರಕಾರವನ್ನು ಬೆಂಬಲಿಸಿ : ಬಿ.ಕೆ.ಹರಿಪ್ರಸಾದ್

ಬೆಂಗಳೂರು : ‘ನಮ್ಮ ಮಕ್ಕಳಿಗೆ ಶಿಕ್ಷಣ, ಆಸ್ಪತ್ರೆ, ಸಾಮಾಜಿಕ ನ್ಯಾಯ ನೀಡುವ ಸರಕಾರಕ್ಕೆ ನೀವು ಶಕ್ತಿ ನೀಡಬೇಕು. ಸಣ್ಣ ಸಮುದಾಯ ಎಂದು ಭಾವಿಸಬೇಡಿ. ನಿಮ್ಮ ಮತ ವಿರುದ್ಧವಾಗಿ ಬಿದ್ದರೆ ಯಾರೂ ಗೆಲ್ಲಲು ಆಗುವುದಿಲ್ಲ. ಹೀಗಾಗಿ ನಿಮ್ಮ ಸಮುದಾಯಕ್ಕೆ ಒಳ್ಳೆಯದು ಮಾಡುವವರಿಗೆ ಮತ ನೀಡಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಮನವಿ ಮಾಡಿದ್ದಾರೆ.
ಶುಕ್ರವಾರ ಇಲ್ಲಿನ ಭಾರತ ಜೋಡೋ ಭವನದಲ್ಲಿ ‘ಕೆಪಿಸಿಸಿ ಅಲೆಮಾರಿ, ಅರೆ ಅಲೆಮಾರಿ, ವಿಮುಕ್ತ ಬುಡಕಟ್ಟು ಘಟಕ’ದ ನೂತನ ಉದ್ಘಾಟನೆ ಮತ್ತು ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಲೆಮಾರಿ ಸಮುದಾಯಕ್ಕೆ ಸೇರಿದವರು. ಅವರಿಗೆ ಇರುವ ಶಕ್ತಿ ನಿಮಗೂ(ಅಲೆಮಾರಿ ಸಮುದಾಯಗಳಿಗೂ)ಇದೆ ಎಂದರು.
ಪ್ರಜಾಪ್ರಭುತ್ವ ಇಲ್ಲದೆ ನಾವು ಯಾರೂ ಇಲ್ಲ. ಆಫ್ರಿಕಾದಲ್ಲಿ ಅಲೆಮಾರಿ, ಬುಡಕಟ್ಟು ಜನರನ್ನು ಗುಲಾಮರನ್ನಾಗಿ ಬಳಸುತ್ತಾರೆ. ಇಲ್ಲೂ ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲ ಎಂದರೆ ಗುಲಾಮರನ್ನಾಗಿ ಬಳಸಿಕೊಳ್ಳುತ್ತಾರೆ. ಹೀಗಾಗಿ ಮತ ಹಾಕುವಾಗ ಪ್ರಜ್ಞಾವಂತರಾಗಿ ಮತ ಹಾಕಿ. ಲಂಬಾಣಿ ಸಮುದಾಯದ ರುದ್ರಪ್ಪ ಲಮಾಣಿ ಮಂತ್ರಿಯಾಗಿದ್ದಾರೆ. ಅವರು ಮಂತ್ರಿಯಾಗಲು 3 ವರ್ಷ ಬೇಕಾಯಿತು. ನಿಮ್ಮ ಪರವಾಗಿ ನಿಲ್ಲುವವರಿಗೆ ನೀವು ಬೆಂಬಲ ನೀಡಬೇಕು ಎಂದು ಹರಿಪ್ರಸಾದ್ ಮನವಿ ಮಾಡಿದರು.
ಈ ನೆಲದ ಯಜಮಾನರು ಎಂದರೆ ಆದಿವಾಸಿಗಳು, ಬುಡಕಟ್ಟು ಹಾಗೂ ದಲಿತರು. ಕಾರಣ, ಈ ದೇಶದ ಮೂಲನಿವಾಸಿಗಳು ನೀವು. ನೀವು ಬಂದ ಬಳಿಕ ಬೇರೆಯವರು ಬಂದಿದ್ದಾರೆ. ಈ ದೇಶದ ನಾಯಕತ್ವ, ಮಾಲಕತ್ವ ನಿಮ್ಮ ಕೈಯಲ್ಲಿ ಇರಬೇಕಿತ್ತು. ಆದರೆ ಬೇರೆ ಯಾರೋ ಆಳುತ್ತಿದ್ದರೆ. ಎಲ್ಲರಿಗೂ ಸಮಾನ ಹಕ್ಕು, ಸಮಬಾಳು, ಸಮಪಾಲು ಎಂಬುದು ಸ್ವಾತಂತ್ರ್ಯದ ಆಶಯವಾಗಿತ್ತು. ನಮಗೆ ರಾಜಕೀಯ ಸ್ವಾತಂತ್ರ್ಯ ಸಿಕ್ಕಿದ್ದರೂ ಸಾಮಾಜಿಕ-ಆರ್ಥಿಕ ಸ್ವಾತಂತ್ರ್ಯ ಸಿಕ್ಕಿಲ್ಲ. ಬುಡಕಟ್ಟು, ಅಲೆಮಾರಿ, ಬುಡಕಟ್ಟಿನವರು ಸ್ವಂತ ಕಾಲಿನ ಮೇಲೆ ನಿಲ್ಲಬೇಕು ಎಂದು ಅವರು ನುಡಿದರು.
ನಿಮ್ಮ ಕಲೆ ಅಂತಾರಾಷ್ಟ್ರೀಯ ಮಟ್ಟದ ಕಲೆಗಿಂತ ಕಡಿಮೆ ಏನಿಲ್ಲ. ದೇಶದ ಅಲೆಮಾರಿ, ಬುಡಕಟ್ಟು ಜನರನ್ನು ನೋಡಿದ್ದೇನೆ. ಜಾರ್ಖಂಡ್ ನಲ್ಲಿ ಘೋಂಡ್ ಸಮುದಾಯದಲ್ಲಿ ಲಿಪಿ, ಸಾಂಸ್ಕೃ ತಿಕ ಚಟುವಟಿಕೆ ಇದೆ. ಗುಜರಾತಿನಲ್ಲಿ ಸಿದ್ಧಿ ಸಮುದಾಯದ ನೃತ್ಯ ಪ್ರಪಂಚದಲ್ಲೇ ಪ್ರಸಿದ್ಧ. ನಿಮ್ಮ ಕಲೆಯನ್ನು ನೀವು ಹೊರ ದೇಶದಲ್ಲಿ ಹೋಗಿ ಪ್ರದರ್ಶನ ಮಾಡಬೇಕು. ನಮ್ಮ ದೇಶದಲ್ಲಿ ರಾಜಕೀಯದ ಜತೆಗೆ ಸಾಮಾಜಿಕ-ಆರ್ಥಿಕ ಸ್ವಾತಂತ್ರ್ಯ ಸಿಕ್ಕಾಗ ಮಾತ್ರ ಸ್ವಾಭಿಮಾನವಾಗಿ ಬದುಕಬಹುದು ಎಂದು ಗಾಂಧೀಜಿ, ಅಂಬೇಡ್ಕರ್ ಹಾಗೂ ನೆಹರೂ ಅವರು ಹೇಳಿದ್ದಾರೆ ಎಂದರು.
ಸೋನಿಯಾ ಗಾಂಧಿ ಅವರು ಅರಣ್ಯ ಹಕ್ಕು ಕಾಯ್ದೆ ತಂದು ನಿಮಗೆ ಹಕ್ಕು ಕೊಡಿಸಿದ್ದಾರೆ. ಮಕ್ಕಳು ಹಸಿವಿನಿಂದ ಮಲಗಬಾರದು ಎಂದು ಆಹಾರ ಭದ್ರತಾ ಕಾಯ್ದೆ ತಂದಿದ್ದು ಮನಮೋಹನ್ ಸಿಂಗ್. ಅವರು ಕಾಯ್ದೆ ಜಾರಿಗೆ ಬಂದ ನಂತರ ಬೇರೆ ಬೇರೆ ನಾಯಕರು ಈ ಯೋಜನೆಗೆ ತಮ್ಮ ಫೋಟೋ ಹಾಕಿಕೊಳ್ಳುತ್ತಾರೆ. ನಮ್ಮ ಪಕ್ಷ ಇಂತಹ ಕಾರ್ಯಕ್ರಮಗಳನ್ನು ನೀಡುತ್ತಲೇ ಇರುತ್ತದೆ. ಕಾಂಗ್ರೆಸ್ ಪಕ್ಷದ ಬಾಗಿಲು ಸದಾ ತೆರಿದಿರುತ್ತದೆ. ನಿಮ್ಮ ಕಾರ್ಯಕ್ರಮಕ್ಕೆ ನಾವು ಈ ವೇದಿಕೆಯನ್ನು ಉಚಿತವಾಗಿ ನೀಡುತ್ತೇವೆ. ಎ.ಯಲ್ಲಪ್ಪ ಅವರು ಅಲೆಮಾರಿ ಹಾಗೂ ಅಲೆ ಅರೆಮಾರಿ ಘಟಕದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದು ಅವರಿಗೆ ಶುಭವಾಗಲಿ ಎಂದು ಅವರು ಕೋರಿದರು.
ಈ ವೇಳೆ ಎಐಸಿಸಿ ಕಾರ್ಯದರ್ಶಿ ಗೋಪಿನಾಥ್ ಪಳನಿಯಪ್ಪನ್, ರಾಜ್ಯಸಭಾ ಮಾಜಿ ಸದಸ್ಯ ಡಾ.ಎಲ್. ಹನುಮಂತಯ್ಯ, ಅಲೆಮಾರಿ ಹಾಗೂ ಅಲೆ ಅರೆಮಾರಿ ಘಟಕದ ನೂತನ ಅಧ್ಯಕ್ಷ ಎ.ಯಲ್ಲಪ್ಪ, ಶಾಸಕ ಮಂಜುನಾಥ್, ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್ ಸೇರಿದಂತೆ ಮತ್ತಿತರರು ಹಾಜರಿದ್ದರು.






