‘ಜ್ಞಾನೇಶ್ ಕುಮಾರ್ ಅವಧಿಯ ಕಾರ್ಯವೈಖರಿ ಅಧಃಪತನ’; ಸ್ವತಂತ್ರ ತನಿಖೆಗೆ ಬಿ.ಕೆ.ಹರಿಪ್ರಸಾದ್ ಆಗ್ರಹ

ಬೆಂಗಳೂರು : ಚು.ಆಯೋಗದ ವಿಶ್ವಾಸಾರ್ಹತೆ, ಪಾರದರ್ಶಕತೆ ಪರಂಪರೆಯ ಮೇಲೆ ಗಂಭೀರ ಪ್ರಶ್ನೆಗಳು ಎದ್ದಿವೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವಧಿಯಲ್ಲಿ ಈ ಸಂಸ್ಥೆಯ ಕಾರ್ಯವೈಖರಿಯೇ ಅಧಃಪತನಕ್ಕೆ ಕುಸಿದಿರುವುದು ಮಾತ್ರವಲ್ಲ, ಆಯುಕ್ತರ ಸರ್ವಾಧಿಕಾರಿತನದ ಕುರಿತು ದಾಖಲೆ ಸಮೇತ ಸಾಬೀತಾಗಿರುವಾಗ ಅವರನ್ನು ಕಾನೂನಿನಡಿಯಲ್ಲಿ ಬಂಧಿಸಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಸ್ವತಂತ್ರ ತನಿಖೆಗೆ ಒಳಪಡಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಒತ್ತಾಯಿದ್ದಾರೆ.
ಗುರುವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ಮೂವರು ಸದಸ್ಯರ ಆಯೋಗದಲ್ಲಿರುವ ಇಬ್ಬರು ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರೇ 10 ತಿಂಗಳಲ್ಲಿ ಕನಿಷ್ಠ 14 ಬಾರಿ, ಜ್ಞಾನೇಶ್ ಕುಮಾರ್ ನಿರ್ಧಾರಗಳ ಹಾಗೂ ಆದೇಶಗಳ ಕುರಿತು ಲಿಖಿತ ಆಕ್ಷೇಪ ದಾಖಲಿಸಿದ್ದಾರೆ. ಮತದಾರರ ಸೇರ್ಪಡೆ-ತೆಗೆದುಹಾಕುವಿಕೆ, ಫಾರಂ-6, ಚುನಾವಣಾ ಪಟ್ಟಿಯ ಡಿಜಿಟಲ್ ವ್ಯವಸ್ಥೆ ಸೇರಿದಂತೆ ಪ್ರಜಾಪ್ರಭುತ್ವದ ಮೂಲವನ್ನೇ ಮುಟ್ಟುವ ವಿಷಯಗಳಲ್ಲಿ ಈ ಆಕ್ಷೇಪಗಳು ದಾಖಲಾಗಿವೆ ಎಂದು ಉಲ್ಲೇಖಿಸಿದ್ದಾರೆ.
ಎಸ್‍ಐಆರ್ ಪ್ರಕ್ರಿಯೆಯ ಫಾರಂ-6ನಲ್ಲಿ ಮಾಡಲಾದ ಬದಲಾವಣೆಯನ್ನು ಆಯುಕ್ತರೇ ʼunauthorised and illegalʼ ಎಂದು ಆಕ್ಷೇಪಿಸಿರುವುದಾಗಿ ವರದಿಯಾಗಿದೆ. ಚು. ಆಯೋಗವೆಂದರೆ ಒಬ್ಬ ವ್ಯಕ್ತಿಯ ಕಚೇರಿಯಲ್ಲ, ಅದು ಮೂವರು ಸದಸ್ಯರ ಸಾಂವಿಧಾನಿಕ ಸಂಸ್ಥೆ. ಇಬ್ಬರು ಆಯುಕ್ತರಿಗೇ ಕೆಲವು ನಿರ್ಧಾರಗಳ ಬಗ್ಗೆ ಮಾಹಿತಿ ಇರಲಿಲ್ಲವೆಂದಾದರೆ ಸಂವಿಧಾನ ವಿರೋಧಿ ನಿರ್ಧಾರಗಳನ್ನು ತೆಗೆದುಕೊಂಡವರು ಯಾರು? ಎಂಬುದನ್ನ ಬಹಿರಂಗಪಡಿಸಬೇಕಿದೆ ಎಂದು ಆಗ್ರಹಿಸಿದ್ದಾರೆ.
ಆಯೋಗ ಯಾವುದೇ ಸರಕಾರದ ಅಧೀನ ಸಂಸ್ಥೆಯೂ ಅಲ್ಲ, ಯಾವುದೇ ರಾಜಕೀಯ ಪಕ್ಷದ ಏಜೆನ್ಸಿಯೂ ಅಲ್ಲ. ಅದು ಭಾರತದ ಪ್ರತಿಯೊಬ್ಬ ಮತದಾರನ ಮತದ ಹಕ್ಕನ್ನು ರಕ್ಷಿಸಬೇಕಾದ ಸಾಂವಿಧಾನಿಕ ಕಾವಲುಗಾರ. ಮತದಾರರನ್ನು ಕ್ಷುಲ್ಲಕ ಕಾರಣಕ್ಕಾಗಿ ಮತದಾರದ ಪಟ್ಟಿಯಿಂದಲೇ ರದ್ದು ಮಾಡುವುದು ಕೇವಲ ಮತದಾನದ ಹಕ್ಕನ್ನು ಕಿತ್ತುಕೊಳ್ಳುವ ಪ್ರಶ್ನೆಯಲ್ಲ ಇದೊಂದು ದೇಶದ್ರೋಹಿ ಕೃತ್ಯವೇ ಸರಿ ಎಂದು ಹರಿಪ್ರಸಾದ್ ಆಕ್ಷೇಪಿಸಿದ್ದಾರೆ.
‘ವೋಟ್ ಚೋರಿ’ ಮೂಲಕ ಬಿಜೆಪಿಗೆ ಅನುಕೂಲವಾಗುವಂತೆ ಆಯೋಗ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ದಾಖಲೆಗಳನ್ನು ಮುಂದಿಟ್ಟು ಆರೋಪ ಮಾಡಿದ್ದರು. ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ಚುನಾವಣೆಗಳ ಕುರಿತು ಎತ್ತಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡದೆ ತಳ್ಳಿಹಾಕಿದ್ದ ಆಯೋಗ, ಈಗ ತನ್ನದೇ ಇಬ್ಬರು ಆಯುಕ್ತರು ದಾಖಲಿಸಿರುವ ಗಂಭೀರ ಆಕ್ಷೇಪಗಳಿಗೆ ಏನು ಉತ್ತರ ಕೊಡುತ್ತದೆ?’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಆಯೋಗದ ಸ್ವತಂತ್ರತೆಯ ಬಗ್ಗೆ ಪ್ರತಿಯೊಬ್ಬರಲ್ಲಿ ಅನುಮಾನ ಮೂಡುವುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಹಲವು ರಾಜ್ಯಗಳಲ್ಲಿ ಬಿಜೆಪಿ ಗೆಲ್ಲಿಸಲು ಜ್ಞಾನೇಶ್ ಕುಮಾರ್ ತೆಗೆದುಕೊಂಡಿರುವ ನಿರ್ಧಾರಗಳ ಬಗ್ಗೆ ತನಿಖೆಯಾಗಬೇಕಿದೆ. ಸಾಂವಿಧಾನಿಕ ಸಂಸ್ಥೆ ರಕ್ಷಿಸಲು ಸಂವಿಧಾನದ ರಕ್ಷಕರಾಗಿರುವ ರಾಷ್ಟ್ರಪತಿ ಕೂಡಲೇ ಮಧ್ಯಪ್ರವೇಶಿಸಿ, ಜ್ಞಾನೇಶ್ ಕುಮಾರ್‍ರನ್ನು ಪದಚ್ಯತಿಗೊಳಿಸಿ, ನ್ಯಾಯಾಂಗ ತನಿಖೆಗೆ ಆದೇಶ ನೀಡುವ ಮೂಲಕ, ಆಯೋಗದ ಮೇಲೆ ವಿಶ್ವಾಸ ಕಳೆದುಕೊಂಡಿರುವ ಜನರ ವಿಶ್ವಾಸವನ್ನು ಮತ್ತೊಮ್ಮೆ ಮರುಸ್ಥಾಪಿಸಬೇಕಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಭಾರತದ @ECISVEEP ಚುನಾವಣಾ ಆಯೋಗದ ವಿಶ್ವಾಸಾರ್ಹತೆ, ಪಾರದರ್ಶಕತೆ ಮತ್ತು ಪಕ್ಷಾತೀತ ಪರಂಪರೆಯ ಮೇಲೆ ಹಿಂದೆಂದೂ ಕಾಣದಷ್ಟು ಗಂಭೀರ ಪ್ರಶ್ನೆಗಳು ಎದ್ದಿವೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವಧಿಯಲ್ಲಿ ಈ ಸಾಂವಿಧಾನಿಕ ಸಂಸ್ಥೆಯ ಕಾರ್ಯವೈಖರಿಯೇ ಅದಃಪತನಕ್ಕೆ ಕುಸಿದಿರುವುದು ಮಾತ್ರವಲ್ಲ, ಸ್ವತಃ ಮುಖ್ಯ ಚುನಾವಣಾ ಆಯುಕ್ತರ… pic.twitter.com/EMuDZAcuCZ
— Hariprasad.B.K. (@HariprasadBK2) September 24, 2026






