ಮಕ್ಕಳು ತಲವಾರ್ ಹಿಡಿದು ಬಿಜೆಪಿ ನಾಯಕರ ಮಾತಿಗೆ ಕುಣಿಯಬೇಕೇ? : ಬಿ.ಕೆ.ಹರಿಪ್ರಸಾದ್
ಮಲ್ಲೇಶ್ವರಂ ಕ್ಷೇತ್ರದಲ್ಲಿ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ

ಬೆಂಗಳೂರು : ‘ನಿಮ್ಮ ಮಕ್ಕಳು ತಲವಾರ್, ಲಾಂಗ್ ಹಿಡಿದು ಬಿಜೆಪಿ ನಾಯಕರ ಮಾತಿಗೆ ಕುಣಿಯುವಂತೆ ಆಗಬೇಕಾ ಅಥವಾ ಶಾಲೆ, ಕಾಲೇಜು ಸೇರಿ ವಿದ್ಯಾವಂತರಾಗಿಸುವ ಕಾಂಗ್ರೆಸ್ ಪಕ್ಷ ಬೇಕಾ ಎಂದು ಆಲೋಚಿಸಿ’ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಗುರುವಾರ ನಗರದ ಕ್ವೀನ್ಸ್‌ರಸ್ತೆಯ ಭಾರತ ಜೋಡೊ ಸಭಾಂಗಣದಲ್ಲಿ ನಡೆದ ಮಲ್ಲೇಶ್ವರಂ ಕ್ಷೇತ್ರದ 40 ಮಂದಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ಹಾಗೂ ಜನತಾದಳ ಸರಕಾರ ಇದ್ದಾಗ ಮಲ್ಲೇಶ್ವರಂ ಕ್ಷೇತ್ರದಲ್ಲಿ ಆಗಬೇಕಾದ ಯಾವುದೇ ಕೆಲಸಗಳು ಆಗಿಲ್ಲ. ಸ್ಯಾಂಕಿಕೆರೆ ಸುಂದರೀಕರಣ ಆಗಿದ್ದು ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ. ಇಂತಹ ಯಾವುದಾದರೂ ಒಂದು ಒಳ್ಳೆಯ ಕೆಲಸ ಬಿಜೆಪಿಗರು ಮಾಡಿದ್ದಾರಾ ಎಂದು ಪ್ರಶ್ನಿಸಿದರು.
ಇದೇ ವೇಳೆ ಮಲ್ಲೇಶ್ವರಂ ಕ್ಷೇತ್ರದ ಚೌಧರಿ ನಾಯ್ಡು, ರವಿ, ಕೃಷ್ಣಮೂರ್ತಿ, ವೈರಮುಡಿ, ಆರ್. ಮುನಿರಾಜು, ಬಾಲಾಜಿ ಸಿಂಗ್, ರಾಘವೇಂದ್ರ ರೆಡ್ಡಿ, ಭಾರ್ಗವ ರೆಡ್ಡಿ, ವೆಂಕಟೇಶ್ ಸತ್ಯವೇಲು, ನಾರಾಯಣಸ್ವಾಮಿ, ರಾಮಯ್ಯ ಗೌಡ ಸಹಿತ 40 ಮಂದಿ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ನಾಯಕ ಸುರೇಶ್ ಗೌಡ ಹಾಗೂ ಶ್ರೀನಿವಾಸ್ ಅವರ ಜೊತೆ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು.




