ಲೇಖಕರನ್ನು ‘ಅರ್ಬನ್ ನಕ್ಸಲ್’ ಎಂದು ದೂರುವುದು ಕಾನೂನು ಬಾಹಿರ : ಸಾಹಿತಿಗಳ ಆಕ್ಷೇಪ
ಬೆಂಗಳೂರು : ಚರ್ಚೆಗೆ ಅರ್ಹವಾದ ಬರಹವನ್ನು ಬರೆದ ಯಾರೆ ಒಬ್ಬ ಲೇಖಕರನ್ನು ‘ಅರ್ಬನ್ ನಕ್ಸಲ್, ದೇಶದ್ರೋಹಿ’ ಎಂದು ದೂರುವುದು ಮತ್ತು ಅವರನ್ನು ದೇಶ ಬಿಟ್ಟು ತೊಲಗಿಸಿ ಎಂದು ಬೆದರಿಸುವುದು ಕಾನೂನು ಬಾಹಿರ ಎಂದು ಪ್ರಗತಿಪರ ಲೇಖಕರು ಹೇಳಿದ್ದಾರೆ.
ಸೋಮವಾರ ಈ ಸಂಬಂಧ ಶಿಕ್ಷಣ ತಜ್ಞ ಡಾ.ಜಿ.ರಾಮಕೃಷ್ಣ, ಹಿರಿಯ ಸಾಹಿತಿ ಡಾ.ಕೆ.ಮರುಳಸಿದ್ಧಪ್ಪ, ಲೇಖಕ ಪ್ರೊ.ಎಸ್.ಜಿ.ಸಿದ್ಧರಾಮಯ್ಯ, ವಿಮರ್ಶಕ ಡಾ.ರಾಜೇಂದ್ರ ಚೆನ್ನಿ, ಹೊಸತು ಪತ್ರಿಕೆ ಸಂಪಾದಕ ಡಾ. ಸಿದ್ಧನಗೌಡ ಪಾಟೀಲ, ಸಾಹಿತಿ ಪ್ರೊ.ಕಾಳೇಗೌಡ ನಾಗವಾರ, ರಾಜ್ಯಸಭಾ ಮಾಜಿ ಸದಸ್ಯ ಡಾ.ಎಲ್. ಹನುಮಂತಯ್ಯ, ಸಂಸ್ಕೃತಿ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ, ಪ್ರೊ.ಅಗ್ರಹಾರ ಕೃಷ್ಣಮೂರ್ತಿ, ಶ್ರೀಪಾದ ಭಟ್ ಬಿ., ಪ್ರೊ.ಎಲ್.ಎನ್.ಮುಕುಂದರಾಜ, ಡಾ.ವಸುಂಧರಾ ಭೂಪತಿ, ಸಬಿತಾ ಬನ್ನಾಡಿ, ರಘುನಂದನ, ಬಿ.ಯು.ಸುಮಾ ಸೇರಿದಂತೆ ಹಲವು ಲೇಖಕರು ಜಂಟಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಡಾ.ರಾಮಲಿಂಗಪ್ಪ ಟಿ.ಬೇಗೂರು ಅವರ ‘ರಾಷ್ಟ್ರೀಯತೆಯ ಆಚರಣೆಯ ಸುತ್ತ’ ಎಂಬ ಲೇಖನವನ್ನು ಕರ್ನಾಟಕ ವಿವಿ ಬಿಎ ಮತ್ತು ಇತರ ಪದವಿಗಳ ವಿದ್ಯಾರ್ಥಿಗಳಿಗೆ 2024-25ನೇ ಸಾಲಿನಿಂದ ಪಠ್ಯವಾಗಿ ಅಳವಡಿಸಲಾಗಿತ್ತು. ಆದರೆ ಕೆಲವು ಬಿಜೆಪಿ ಮತ್ತು ಎಬಿವಿಪಿ ನಾಯಕರ ಮತ್ತು ಕಾರ್ಯಕರ್ತರ ಪ್ರತಿಭಟನೆಯ ಮೇರೆಗೆ ಅದನ್ನು ಹಿಂಪಡೆಯಲಾಗಿದೆ. ವಿವಿಯಲ್ಲಿ ಅದನ್ನು ಪಠ್ಯ ಮಾಡಬೇಕೆ ಬೇಡವೆ ಎಂಬುದು ವಿವಿಯ ಸ್ವಾಯತ್ತತೆಗೆ ಬಿಟ್ಟ ವಿಚಾರ. ಆದರೆ ಲೇಖಕರ ವಿಚಾರವನ್ನು ವಿರೋಧಿಸುವ ಬದಲು ಲೇಖಕರನ್ನು, ಸಂಪಾದಕರನ್ನು ಅವಮಾನಿಸುವುದು ಸರಿಯಾದುದಲ್ಲ ಎಂದು ಅವರುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆ ಮಾಡಿದವರು ಮತ್ತು ಮಾಧ್ಯಮದ ಕೆಲವರು ಆಯ್ದ ಪದ ಮತ್ತು ವಾಕ್ಯಗಳನ್ನು ತಮ್ಮ ಮೂಗಿನ ನೇರಕ್ಕೆ ಅರ್ಥೈಸುವ ಕೆಲಸ ಮಾಡಿದ್ದಾರೆ. ಆ ಮೂಲಕ ವಿವಿಯನ್ನು, ಸಂಪಾದಕರನ್ನು ಮತ್ತು ಲೇಖಕರನ್ನು ದೇಶದ್ರೋಹಿಗಳು ಎಂದು ಆರೋಪಿಸಿದ್ದಾರೆ. ರಾಮಲಿಂಗಪ್ಪನವರ ಬರಹ ವೈಯಕ್ತಿಕವಾಗಿ ಯಾರೊಬ್ಬರನ್ನೂ ನಿಂದಿಸುವುದಿಲ್ಲ. ದೇಶಕ್ಕೆ ಅವಮಾನವನ್ನೂ ಮಾಡುವುದಿಲ್ಲ. ನಮ್ಮಲ್ಲಿ ಆಚಾರದಲ್ಲಿರುವ ರಾಷ್ಟ್ರೀಯತೆಯ ವಿವಿಧ ಆಯಾಮಗಳನ್ನು ಅಲ್ಲಿ ಚರ್ಚೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಯಾವುದೆ ಲೇಖಕರ ಅಭಿಪ್ರಾಯ ಬೇರೆ ಬೇರೆ ರೀತಿಯ ಚರ್ಚೆಗಳಿಗೆ ದಾರಿ ಮಾಡಿಕೊಟ್ಟಲ್ಲಿ ಅಂಥದ್ದನ್ನು ವಿಚಾರದ ನೆಲೆಯಲ್ಲಿ ಯಾರೇ ವಿರೋಧಿಸಿ ಪ್ರತಿವಾದ ಹೂಡಲಿ. ಸಾರ್ವಜನಿಕವಾಗಿ ಸೌಹಾರ್ದಯುತವಾಗಿ ಚರ್ಚೆ ಮಾಡಲಿ. ಆದರೆ ಅದಕ್ಕೆ ಬಂದಿರುವ ಮೀಡಿಯಾ ಪ್ರತಿಕ್ರಿಯೆಗಳನ್ನು ನೋಡಿದಾಗ ಅಲ್ಲಿ ಲೇಖಕರ ಮಾನಹರಣ ಮತ್ತು ತೇಜೋವಧೆ ಎದ್ದು ಕಾಣುತ್ತದೆ. ಅವರನ್ನು ಅಪರಾಧಿಯನ್ನಾಗಿ ಬಿಂಬಿಸುವ ಯತ್ನ ಕಾಣುತ್ತದೆ. ಪಕ್ಷ ರಾಜಕೀಯಕ್ಕೆ ವಿದ್ವತ್ ಬರಹವನ್ನು ಸೀಮಿತ ಮಾಡುವ ಮತ್ತು ವೋಟ್ ಬ್ಯಾಂಕ್ ರಾಜಕಾರಣ ಮಾಡುವ ಹುನ್ನಾರ ಕಾಣುತ್ತದೆ ಎಂದು ಹೇಳಿದ್ದಾರೆ.
ಠ್ಯಾಗೋರ್, ಕುವೆಂಪು, ಭಗತ್‍ಸಿಂಗ್ ಹೀಗೆ ಹಲವಾರು ಮಂದಿ ಕಾಲಕಾಲಕ್ಕೆ ರಾಷ್ಟ್ರೀಯತೆಯನ್ನು ಕುರಿತು ವಿಮರ್ಶಾತ್ಮಕವಾಗಿ ಬರೆದಿದ್ದಾರೆ. ಲೇಖಕರ ಮನೋಸ್ಥೈರ್ಯವನ್ನು ಕುಂದಿಸುವ ಕೆಲಸ, ನಿರ್ದಿಷ್ಟ ಕೋಮು ಮತ್ತು ಗುಂಪಿನವರ ಸಿದ್ಧಾಂತಕ್ಕೆ ಅನುಗುಣವಾಗಿಯೆ ಬರೆಯಿರಿ ಮತ್ತು ಬದುಕಿರಿ ಎಂದು ಫರ್ಮಾನು ಹೊರಡಿಸುವ ಕೆಲಸ ಸಂವಿಧಾನ ವಿರೋಧಿ ಆದುದು. ಇದನ್ನು ನಾವೆಲ್ಲ ಖಂಡಿಸುತ್ತೇವೆ. ಹಾಗೆಯೆ ಲೇಖಕರಿಗೆ ಕೋಮುವಾದಿಗಳಿಂದ ಸೂಕ್ತ ರಕ್ಷಣೆ ಒದಗಿಸಬೇಕೆಂದು ಲೇಖಕರು ಒತ್ತಾಯಿಸಿದ್ದಾರೆ.







