ಬಿಎಲ್ಒ ಕೆಲಸಗಳಿಂದ ಅಂಗನವಾಡಿ ನೌಕರರನ್ನು ಕೈಬಿಡಲು ಒತ್ತಾಯ

ಸಾಂದರ್ಭಿಕ ಚಿತ್ರ | Photo Credit : PTI
ಬೆಂಗಳೂರು : ರಾಜ್ಯ ಚುನಾವಣಾ ಆಯೋಗವು ಬೂತ್ಮಟ್ಟದ ಅಧಿಕಾರಿ(ಬಿಎಲ್ಒ) ಕೆಲಸಗಳಿಂದ 25 ಸಾವಿರ ಅಂಗನವಾಡಿ ನೌಕರರನ್ನು ಕೂಡಲೇ ಕೈಬಿಡಬೇಕು ಎಂದು ರಾಜ್ಯ ಅಂಗನವಾಡಿ ನೌಕರರ ಸಂಘಟನೆ ಒತ್ತಾಯಿಸಿದೆ.
ಬುಧವಾರ ಆಯೋಗಕ್ಕೆ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ನೌಕರರ ಸಂಘದ ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮಿ, ಆರು ವರ್ಷದೊಳಗಿನ ಮಕ್ಕಳನ್ನು ಅಪೌಷ್ಟಿಕತೆಯಿಂದ ಕಾಪಾಡಲು, ಪೂರ್ವ ಪ್ರಾಥಮಿಕ ಶಿಕ್ಷಣ ಕೊಡುವುದು, ಗರ್ಭಿಣಿ-ಬಾಣಂತಿಯರನ್ನು ಕಾಲಕಾಲಕ್ಕೆ ಆರೈಕೆ ಮಾಡುವುದು, ದಿನನಿತ್ಯದ ಕೆಲಸವಾಗಿದೆ. 2022ರಿಂದ ಪ್ರತಿದಿನ ಪೋಷಣ್ ಟ್ರ್ಯಾಕರ್ ಮುಖಾಂತರ ಕೆಲಸದ ಚಟುವಟಿಕೆಗಳನ್ನು ಮೊಬೈಲ್ ಮುಖಾಂತರ ದಾಖಲೀಕರಣ, ಎಫ್ಆರ್ ಎಸ್ ಬಂದಿರುವ ಹಿನ್ನಲೆಯಲ್ಲಿ ನಿತ್ಯ ಅಂಗನವಾಡಿಯಲ್ಲಿ ಆರೇಳು ಗಂಟೆ ಸತತ ಕೆಲಸ ಹೀಗೆ ಅನೇಕ ರೀತಿಯಲ್ಲಿ ಮಾಡುತ್ತಿದ್ದಾರೆ ಎಂದು ವಿವರಿಸಿದರು.
ಈ ಹಿನ್ನಲೆಯಲ್ಲಿ ಅಂಗನವಾಡಿ ನೌಕರರಿಗೆ ಬಿಎಲ್ಒ ಕೆಲಸ ಹೆಚ್ಚುವರಿಯಾಗಿದೆ. ಹೆಚ್ಚುವರಿ ಕೆಲಸ ಮಾಡದೇ ಐಸಿಡಿಎಸ್ ಕೆಲಸಕ್ಕೆ ಮಾತ್ರ ಸೀಮಿತಗೊಳಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 2023ರ ಮಾ.17ರಂದು ನಿರ್ದೇಶನ ನೀಡಿದೆ ಮತ್ತು ಚುನಾವಣಾ ಆಯೋಗಕ್ಕೂ ಪತ್ರ ಬರೆದಿದೆ. ಆದರೂ ಚುನಾವಣಾ ಆಯೋಗದ ತಾಲೂಕು-ಜಿಲ್ಲಾಧಿಕಾರಿಗಳು ಅಮಾನವೀಯವಾಗಿ ವರ್ತಿಸುತ್ತಿದ್ದಾರೆ ಎಂದು ವರಲಕ್ಷ್ಮಿ ತಿಳಿಸಿದರು.
ಸಾವಿರಾರು ಜನರಿಗೆ ಕೆಲಸದಿಂದ ಅಮಾನತ್ತು, ಜೈಲಿಗೆ ಹಾಕಬಹುದೆಂಬ ಎಚ್ಚರಿಕೆಯ ನೊಟೀಸ್ನ್ನು ನೀಡುತ್ತಿದ್ದಾರೆ. 50 ವರ್ಷಗಳಿಂದ ಗೌರವ ಧನದ ಆಧಾರದ ಮೇಲೆ ಕೆಲಸ ಮಾಡುವ ಈ ಮಹಿಳೆಯರನ್ನು ಇಷ್ಟು ಕ್ರೂರವಾಗಿ ನಡೆಸಿಕೊಳ್ಳುವುದು ನ್ಯಾಯವೇ? ಉಡುಪಿಯಲ್ಲಿ ಮೂರು ಜನರನ್ನು ಕೆಲಸದಿಂದ ತೆಗೆಯಲಾಗಿದೆ. ಈ ಮಾನಸಿಕ ಒತ್ತಡಗಳಿಗೊಳಗಾಗಿ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಹಲವರು ರಾಜೀನಾಮೆ ಕೊಡಲು ಮುಂದಾಗಿದ್ದಾರೆ ಎಂದು ಅವರು ಹೇಳಿದರು.
ಎಸ್ಐಆರ್ ಕೆಲಸ ಇರುವ ಕಾರಣದಿಂದ ಗುರಿ ನಿರ್ಧರಿತ ಪ್ರೊಜನಿ ಮತ್ತು ಮ್ಯಾಪಿಂಗ್ ಮಾಡುವ ಕೆಲಸಗಳಲ್ಲಿ ವ್ಯತ್ಯಾಸವಾದರೆ ಅಂಗನವಾಡಿ ನೌಕರರನ್ನು ಜವಬ್ದಾರಿ ಮಾಡಬಾರದು. ಚುನಾವಣಾ ಆಯೋಗಕ್ಕೆ ಇರುವ ಇತಿ ಮಿತಿಗಳನ್ನು ಅರ್ಥ ಮಾಡಿಕೊಳ್ಳುತ್ತೇವೆ. ತಕ್ಷಣದಲ್ಲಿ 50 ವರ್ಷ ದಾಟಿದ, ತೀವ್ರ ಅನಾರೋಗ್ಯಕ್ಕೆ ಗುರಿಯಾಗಿರುವ ಮತ್ತು ವಿಶೇಷ ಚೇತನರನ್ನು ಕೂಡಲೇ ಬಿಎಲ್ಒ ಕೆಲಸಗಳಿಂದ ಕೈಬಿಡಬೇಕು ಎಂದು ಚುನಾವಣಾ ಆಯೋಗಕ್ಕೆ ಒತ್ತಾಯ ಮಾಡಲಾಗಿದೆ ಎಂದು ವರಲಕ್ಷ್ಮಿ ವಿವರಿಸಿದರು.
ಈ ವೇಳೆ ಅಂಗನವಾಡಿ ನೌಕರರ ಸಂಘದ ಸದಸ್ಯರಾದ ಎಚ್.ಎಸ್.ಸುನಂದಾ, ಜಯ ಮಂಗಲಾ, ಗುಲ್ಜಾರ್ ಬಾನು, ಯಮುನಾ, ದೇವಮ್ಮ, ಸುಶೀಲಾ ನಾಡ, ದುರ್ಗಮ್ಮ, ಕಲಾ, ಮಂಗಳಾ, ಶಶಿ ನಂಜನಗೂಡು ಸೇರಿದಂತೆ ಹಲವರು ಭಾಗವಹಿಸಿದ್ದರು.






