ಚಿತ್ತಾಲರ ಕಥೆಗಳು ಶೋಷಿತರ ದುಮ್ಮಾನಗಳ ಬಗ್ಗೆ ಮಾತನಾಡುತ್ತವೆ : ಬಿ.ಎಂ.ಹನೀಫ್

ಬೆಂಗಳೂರು : ಯಶವಂತ ಚಿತ್ತಾಲರ ಬಹುತೇಕ ಕಥೆಗಳು ಶೋಷಿತರ ದುಃಖ, ದುಮ್ಮಾನಗಳ ಬಗ್ಗೆ ಮಾತನಾಡುತ್ತವೆ. ವೈಯಕ್ತಿಕ ದುಃಖವೇ ಸಾರ್ವತ್ರಿಕ ದುಃಖವಾಗಿ ಓದುಗರ ಮನಸಲ್ಲಿ ಗಾಢ ವಿಷಾದ ಹೆಪ್ಪುಗಟ್ಟುತ್ತದೆ ಎಂದು ಹಿರಿಯ ಪತ್ರಕರ್ತ ಬಿ.ಎಂ.ಹನೀಫ್ ತಿಳಿಸಿದ್ದಾರೆ.
ಗುರುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ನಗರದ ಎನ್.ಎಂ.ಕೆ. ಆರ್.ವಿ.ಕಾಲೇಜಿನ ಸಭಾಂಗಣದಲ್ಲಿ ನಡೆದ ‘ಅಂಗಳದಲ್ಲಿ ತಿಂಗಳ ಪುಸ್ತಕ’ ಕಾರ್ಯಕ್ರಮದಲ್ಲಿ ಚಿತ್ತಾಲರ ಕಥೆಗಳ ಕುರಿತು ಅವರು ಉಪನ್ಯಾಸ ನೀಡಿದರು.
ಜೋಪಡಿಯ ಭಿಕ್ಷುಕರು, ಭೂಹೀನರು, ಶೋಷಿತರು, ಕಾರ್ಮಿಕರು ಮತ್ತು ವಂಚಿತ ಹೆಣ್ಣುಮಕ್ಕಳೇ ಚಿತ್ತಾಲರ ಬಹುತೇಕ ಕಥೆಗಳ ಕೇಂದ್ರ ಪಾತ್ರಗಳಾಗಿದ್ದಾರೆ. ಚಿತ್ತಾಲರ ಸಣ್ಣ ಕಥೆಗಳಲ್ಲಿ ಕ್ರಾಂತಿ ಮತ್ತು ಬಂಡಾಯದ ಗಟ್ಟಿ ಧ್ವನಿಯ ಘೋಷಣೆಗಳಿಲ್ಲ. ಆದರೆ, ನೊಂದವರ, ಶೋಷಿತರ ದುಃಖ, ದುಮ್ಮಾನಗಳನ್ನು ಚಿತ್ರಿಸುತ್ತಾ ಹೋಗುತ್ತವೆ ಎಂದು ಹನೀಫ್ ಹೇಳಿದರು.
ಅದರಲ್ಲೂ ಚಿತ್ತಾಲರ ಕಥೆಗಳಲ್ಲಿ ಹೆಚ್ಚಾಗಿ ಜೋಪಡಿಯ ಭಿಕ್ಷುಕರು, ಭೂಹೀನರು, ಶೋಷಿತರು, ಕಾರ್ಮಿಕರ ಪಾತ್ರಗಳ ಬಾಲ್ಯದ ದುರಂತಗಳೇ ಸ್ಥಾಯಿಯಾಗಿವೆ. ಮನುಷ್ಯನ ಅಂತರಂಗದ ಕ್ಷೋಭೆಯನ್ನು ಮರುಶೋಧಿಸಲು ಅವರು ಬಳಸುವ ಭಾಷೆ ಮತ್ತು ಸಾಹಿತ್ಯಕ ತಂತ್ರಗಳಿಂದಾಗಿ ಅವರ ಕಥೆಗಳು ತೀವ್ರ ಕುತೂಹಲದಿಂದ ಓದಿಸಿಕೊಳ್ಳುತ್ತವೆ ಎಂದು ಹನೀಫ್ ವಿವರಿಸಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಮಾತನಾಡಿದರು. ಎನ್‌ಎಂಕೆಆರ್‌ವಿ ಕಾಲೇಜಿನ ಪ್ರಾಂಶುಪಾಲೆ ಡಾ.ಸುಚಿತ್ರಾ ಆರ್. ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಸಂಧ್ಯಾ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಶೈಲೇಶ ಚಂದ್ರಗುಪ್ತಾ, ಹಿರಿಯ ಸಾಹಿತಿ ಬೇಲೂರು ರಾಮಮೂರ್ತಿ ಉಪಸ್ಥಿತರಿದ್ದರು.






