ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್: ಪ್ರತಿಭಾ ಪುರಸ್ಕಾರ ಮತ್ತು ಪುಸ್ತಕ ಬಿಡುಗಡೆ

ಬೆಂಗಳೂರು : ‘ಬೆಳಕು ಮತ್ತು ಕತ್ತಲು ಸಮಾನವಾಗಿರಲು ಸಾಧ್ಯವಿಲ್ಲವೋ, ಅದೇ ರೀತಿ ತಿಳಿದವರು ಮತ್ತು ತಿಳಿಯದವರು ಸಮಾನರಾಗಲು ಸಾಧ್ಯವಿಲ್ಲ’ ಎಂದು ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯಾಧ್ಯಕ್ಷ ಡಾ.ಮುಹಮ್ಮದ್ ಸಾದ್ ಬೆಲ್ಗಾಮಿ ಹೇಳಿದರು.
ರವಿವಾರ ನಗರದ ಬಿಫ್ಟ್ ಸಭಾಂಗಣದಲ್ಲಿ ಏರ್ಪಡಿಸಿದ ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಕರ್ನಾಟಕ ಇದರ ಪ್ರತಿಭಾ ಪುರಸ್ಕಾರ ವಿತರಣಾ ಹಾಗೂ ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಯಾವ ಸಮುದಾಯ ಓದು ಮತ್ತು ಜ್ಞಾನ ಸಂಪಾದನೆಯಲ್ಲಿ ಮುಂದಿರುತ್ತದೆಯೊ ಅದು ಜಗತ್ತಿಗೆ ದಿಕ್ಕು ತೋರಿಸುವ ಅರ್ಹತೆ ಹೊಂದಿರುತ್ತದೆ, ಪಾಲಕರು ಮಕ್ಕಳಿಗೆ ಲೌಕಿಕ ಶಿಕ್ಷಣದ ಜೊತೆಗೆ ಧಾರ್ಮಿಕ ಹಾಗೂ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವುದರಲ್ಲಿ ಮುಖ್ಯ ಪಾತ್ರವನ್ನು ವಹಿಸಬೇಕು ಎಂದು ಅವರು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ವತಿಯಿಂದ ಪ್ರಕಟಗೊಂಡ ‘ದಿನೇ ಇಸ್ಲಾಮ್’ ಪುಸ್ತಕವನ್ನು ಮುಹಮ್ಮದ್ ಸಾದ್ ಬೆಲ್ಗಾಮಿ ಬಿಡುಗಡೆಗೊಳಿಸಿದರು.
ಜಮಾಅತೆ ಇಸ್ಲಾಮೀ ಹಿಂದ್ ಕೇಂದ್ರ ಕಾರ್ಯದರ್ಶಿ ಸಯ್ಯದ್ ತನ್ವೀರ್ ಅಹ್ಮದ್ ಮಾತನಾಡಿ, ಹೆತ್ತವರು ಮಕ್ಕಳಿಗೆ ಅವರ ಜೀವನದಲ್ಲಿ ಅನೇಕ ಸವಲತ್ತುಗಳನ್ನು ಒದಗಿಸಿಕೊಡುತ್ತಾರೆ, ಆದರೆ ದುರದೃಷ್ಟವಶಾತ್ ಅವರ ತರಬೇತಿ ಹಾಗೂ ಅವರನ್ನು ಒಳ್ಳೆಯ ಚಾರಿತ್ರ್ಯವಂತರನ್ನಾಗಿಸುವ ವಿಷಯದಲ್ಲಿ ಸೋಲುತ್ತಿರುವುದು ನಿಜಕ್ಕೂ ದುರಂತವೇ ಸರಿ ಎಂದು ತಿಳಿಸಿದರು.
ಈ ನಿಟ್ಟಿನಲ್ಲಿ ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಸಂಸ್ಥೆಯು ಮಕ್ಕಳನ್ನು ರೂಪಿಸುವ, ಅವರ ಭವಿಷ್ಯವನ್ನು ಸುಧಾರಿಸುವ ಕೆಲಸಕ್ಕೆ ನಾಂದಿ ಹಾಡಿರುವುದು ನಿಜಕ್ಕೂ ಅಭಿನಂದನಾರ್ಹ ಕಾರ್ಯ ಎಂದು ಅವರು ಶ್ಲಾಘಿಸಿದರು.
ಬಿ.ಐ.ಇ ಚೇರ್ಮನ್ ಮೌಲಾನಾ ಅಬ್ದುಲ್ ಗಫ್ಫಾರ್ ಹಾಮಿದ್ ಉಮರಿ, ಬೆಂಗಳೂರು ನಗರ ಸಂಚಾಲಕ ಪ್ರೊ.ಶೇಖ್ ಹಾರೂನ್ ಸಫ್ದರ್ ಮಾತನಾಡಿದರು.
ಬಿ.ಐ.ಇ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಹಾಫೀಝ್ ಝುಬೇರ್ ಅಹ್ಮದ್ ಉಮರಿ ಉಪಸ್ಥಿತರಿದ್ದರು.
ಬಿ.ಐ.ಇ ರಾಜ್ಯ ಕಾರ್ಯದರ್ಶಿ ರಿಯಾಝ್ ಅಹ್ಮದ್ ರೋಣ ಪ್ರಾಸ್ತಾವಿಕ ಭಾಷಣ ಮಾಡಿದರು. ಮೌಲಾನಾ ಆಮೀರ್ ಉಮರಿ ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡ ಪುಸ್ತಕದ ಪರಿಚಯ ಮಾಡಿಸಿದರು, ಎಸ್.ಎಂ.ಸಾದಾತ್ ಸ್ವಾಗತಿಸಿದರು. ಅಸದುಲ್ಲಾಹ್ ಆಮೀರ್ ಕಾರ್ಯಕ್ರಮವನ್ನು ನಿರೂಪಿಸಿದರು. ಮೌಲಾನಾ ಮುಬಾರಕ್ ಉಮರಿ ಕೊನೆಯಲ್ಲಿ ಧನ್ಯವಾದ ಅರ್ಪಿಸಿದರು. ಈ ಸಂದರ್ಭದಲ್ಲಿ ಬೆಂಗಳೂರು ಮಟ್ಟದ ರ್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.






