ರಾಜ್ಯ ಸರಕಾರದ ವಿರುದ್ಧ ರಾಹುಲ್ ಗಾಂಧಿಗೆ ಬಿ.ಆರ್.ಪಾಟೀಲ್ ದೂರು

ಬೆಂಗಳೂರು : ರಾಜ್ಯದಲ್ಲಿನ ಆಡಳಿತಾರೂಢ ಕಾಂಗ್ರೆಸ್ ಸರಕಾರ ನುಡಿದಂತೆ ನಡೆಯುತ್ತಿಲ್ಲ. ಸರಕಾರದ ಕಾರ್ಯವೈಖರಿಯ ವಿರುದ್ಧ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಗೆ ದೂರು ನೀಡಲಾಗುವುದು ಎಂದು ಕಲಬುರಗಿ ಜಿಲ್ಲೆಯ ಆಳಂದ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ಬಿ.ಆರ್.ಪಾಟೀಲ್ ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ಹಣಕಾಸು ಸಚಿವರಾಗಿ ರೂಪಿಸಿದ್ದ ಆಯವ್ಯಯವನ್ನು ಬದಲಾವಣೆ ಮಾಡುವಲ್ಲಿಯೂ ಕೆಲವು ಕಾಣದ ಕೈಗಳು ಕೆಲಸ ಮಾಡಿದ್ದವು. ಆ ವೇಳೆ ತಾನು ಯೋಜನಾ ಆಯೋಗದ ಉಪಾಧ್ಯಕ್ಷನಾಗಿದ್ದೆ. ಬಜೆಟ್ ತಯಾರಿಕೆಯ ಸಭೆಯಲ್ಲಿ ಭಾಗವಹಿಸಿದ್ದೆ ಎಂದು ನುಡಿದರು.
ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿ 79ಎ, ಬಿ, ಸಿ ಸೆಕ್ಷನ್‍ಗಳನ್ನು ತೆಗೆದು ಹಾಕುವುದಾಗಿ ಭರವಸೆ ನೀಡಿತ್ತು. ಈ ಸೆಕ್ಷನ್‍ಗಳಿಂದ ಕೃಷಿಕರಲ್ಲದವರು ಭೂಮಿ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಉಳ್ಳವರು ರೈತರ ಭೂಮಿ ಕಸಿಯುತ್ತಿದ್ದಾರೆ. ಹೀಗಾಗಿ ರೈತರೇ ಭೂ ಹಿಡುವಳಿ ಹೊಂದಿರಬೇಕೆಂಬುದು ಪಕ್ಷದ ನಿಲುವಾಗಿತ್ತು ಎಂದರು.
ಸಿದ್ದರಾಮಯ್ಯ ಬಜೆಟ್ ತಯಾರಿಕೆಯ ವೇಳೆ ಈ ಕುರಿತು ಚರ್ಚೆಯಾಗಿತ್ತು. ಸಿದ್ದರಾಮಯ್ಯ ಕಾನೂನು ತಿದ್ದುಪಡಿಗೆ ಸಮ್ಮತಿಸಿದ್ದರು. ಬಜೆಟ್ ಭಾಷಣದ ಪ್ರತಿಯಲ್ಲಿ ಸೇರ್ಪಡೆಯಾಯಿತು. ಸರಿ-ತಪ್ಪುಗಳನ್ನು ಪರಾಮರ್ಶಿಸುವ ಕೊನೆಯ ಕ್ಷಣದಲ್ಲಿ ಮುದ್ರಣಕ್ಕೂ ಹೋಗಿತ್ತು. ಆದರೆ ಬೆಳಗ್ಗೆ ಮಂಡನೆಯಾದ ಬಜೆಟ್‍ನಲ್ಲಿ ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿ ಅಂಶ ಇರಲಿಲ್ಲ ಎಂದು ಬಿ.ಆರ್.ಪಾಟೀಲ್ ಉಲ್ಲೇಖಿಸಿದರು.
ಸಿದ್ದರಾಮಯ್ಯ ಸಿದ್ಧಪಡಿಸಿದ್ದ ಬಜೆಟ್ ಅನ್ನು ಬದಲಾವಣೆ ಮಾಡಿದ್ದರ ಹಿಂದೆ ಪ್ರಭಾವಿಗಳ ಕೈವಾಡ ಇತ್ತು. ನಂತರ ನಾನು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ಅದನ್ನು ವಾಪಸ್ ಪಡೆಯಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‍ಸಿಂಗ್ ಸುರ್ಜೇವಾಲ ತಮ್ಮ ಮನವೊಲಿಸುವ ಪ್ರಯತ್ನ ಮಾಡಿದ್ದರು. ಯಾವ ಪುರುಷಾರ್ಥಕ್ಕೆ ತಾವು ಉಪಾಧ್ಯಕ್ಷರಾಗಿರಬೇಕೆಂದು ತಾವು ಅವರನ್ನು ಪ್ರಶ್ನಿಸಿದ್ದೆ ಎಂದು ಬಿ.ಆರ್.ಪಾಟೀಲ್ ತಿಳಿಸಿದರು.
ಈ ವಿಚಾರವನ್ನು ನಾನು ಇಲ್ಲಿಗೆ ಬಿಡುವುದಿಲ್ಲ, ಎಐಸಿಸಿ ಮುಖಂಡರು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರಿಗೆ ಪತ್ರ ಬರೆಯುತ್ತೇನೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಚುನಾವಣೆ ಸಂದರ್ಭದಲ್ಲಿ ರಾಜ್ಯದ ಜನರಿಗೆ ಕೊಟ್ಟ ಭರವಸೆಯನ್ನು ಈಡೇರಿಸಬೇಕು ಎಂದು ಬಿ.ಆರ್.ಪಾಟೀಲ್ ತಿಳಿಸಿದರು.






