ಪಂಚ ರಾಜ್ಯ ಚುನಾವಣೆ ಫಲಿತಾಂಶ | ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯವಿಲ್ಲ: ಬಿ.ಎಸ್.ಯಡಿಯೂರಪ್ಪ

ಬೆಂಗಳೂರು, ಮೇ 4: ‘ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷ (ಟಿಎಂಸಿ) ಧೂಳಿಪಟ ಆದಂತಾಗಿದ್ದು, ಕರ್ನಾಟಕ ರಾಜ್ಯದಲ್ಲೂ ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ನೆಲಕಚ್ಚಲಿದೆ. ಆ ಪಕ್ಷಕ್ಕೆ ಯಾವುದೇ ಭವಿಷ್ಯ ಇಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದಲ್ಲಿ ಒಂದೆರಡು ಸ್ಥಾನಗಳನ್ನೂ ಗೆಲ್ಲಲೂ ಆಗದ ಕಾಂಗ್ರೆಸ್‍ಗೆ ಬಿಜೆಪಿ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಪ್ರಧಾನಿ ಮೋದಿ ನಾಯಕತ್ವದಲ್ಲಿ ಜನತೆಯ ವಿಶ್ವಾಸವನ್ನು ಮತ್ತೊಮ್ಮೆ ದೃಢಪಡಿಸಿದೆ’ ಎಂದು ಹೇಳಿದರು.
ಇದೊಂದು ಐತಿಹಾಸಿಕ ಫಲಿತಾಂಶ. ಇದಕ್ಕಾಗಿ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ನಿರಂತರ ಮಾರ್ಗದರ್ಶನ ನೀಡಿದ್ದಾರೆ ಮತ್ತು ಪಕ್ಷವನ್ನು ಮುನ್ನಡೆಸಿದ್ದಾರೆ. ಅವರಿಗೆ ಅಭಿನಂದನೆಗಳು. ಅಭಿವೃದ್ಧಿ-ವಿಕಸಿತ ಭಾರತ ನಿರ್ಮಾಣ ಮಾಡಬೇಕು ಎಂಬ ಎನ್‍ಡಿಎ ಬದ್ಧತೆಗೆ ಮತದಾರರು ಆಶೀರ್ವಾದ ಮಾಡಿದ್ದಾರೆ.
ಜನರಿಗೆ ಕೇವಲ ಉಚಿತ ಘೋಷಣೆಗಳನ್ನು ಮಾಡಿ ದೀರ್ಘಕಾಲ ಮರುಳು ಮಾಡಲು ಸಾಧ್ಯವಿಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ. ಮೌಲ್ಯಾಧಾರಿತ ಅಭಿವೃದ್ಧಿ, ಸ್ಥಿರತೆ ಮತ್ತು ಪಾರದರ್ಶಕತೆಯ ಸರ್ಕಾರವನ್ನು ಜನರು ಬಯಸಿದ್ದಾರೆ. ಆದ್ದರಿಂದಲೇ ಬಿಜೆಪಿಗೆ ಗೆಲುವು ತಂದುಕೊಟ್ಟಿದ್ದಾರೆ. ನಾವು ಜನರ ತೀರ್ಪನ್ನು ಒಪ್ಪಿಕೊಳ್ಳಬೇಕು. ಈ ಗೆಲುವಿಗಾಗಿ ಅಸಂಖ್ಯಾತ ಕಾರ್ಯಕರ್ತರು ಬದ್ಧತೆಯಿಂದ ಹಗಲಿರುಳು ಶ್ರಮಿಸಿದ್ದಾರೆ ಎಂದು ಅವರು ಪ್ರಶಂಸಿಸಿದರು.






