‘ವಂದೇ ಮಾತರಂ’ ಗೀತೆ ಮೊಟಕು ವಿರುದ್ಧ ಪಾದಯಾತ್ರೆ : ಬಿ.ವೈ.ವಿಜಯೇಂದ್ರ

ಬೆಂಗಳೂರು : ವಂದೇ ಮಾತರಂ ಗೀತೆ ಮೊಟಕುಗೊಳಿಸಿರುವುದನ್ನು ಖಂಡಿಸಿ ಬಿಜೆಪಿಯಿಂದ ಸೆ.15ರಿಂದ ಐದು ದಿನಗಳ ಕಾಲ ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ಪಾದಯಾತ್ರೆ ಮೂಲಕ ಹೋರಾಟ ನಡೆಸಿ ತಹಸೀಲ್ದಾರ್, ಜಿಲ್ಲಾಧಿಕಾರಿ ಮನವಿ ಸಲ್ಲಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ವಂದೇ ಮಾತರಂ ಗೀತೆ ಮೊಟಕುಗೊಳಿಸಿರುವ ನಿರ್ಧಾರವನ್ನು ರಾಜ್ಯ ಸರಕಾರವು ಹಿಂಪಡೆಯಬೇಕು. ವಂದೇ ಮಾತರಂ ಒಂದು ಕೇವಲ ಗೀತೆಯಲ್ಲ, ಕೋಟ್ಯಂತರ ಭಾರತೀಯರಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹೊತ್ತಿಸಿದ ಗೀತೆ ಅದು ಎಂದರು.
‘ಆ ಗೀತೆಯು ಜನರಲ್ಲಿ ದೇಶಭಕ್ತಿಯ ಭಾವನೆ ಮೂಡಿಸಿದೆ. ಆರು ಚರಣಗಳನ್ನು ಹಾಡುವಂತೆ ಕೇಂದ್ರ ಸರಕಾರ ತೀರ್ಮಾನಿಸಿದೆ. ಆದರೆ, ಇಲ್ಲಿನ ಸರಕಾರ, ಮುಖ್ಯಮಂತ್ರಿ ಕೇವಲ ಎರಡು ಚರಣಗಳನ್ನು ಹಾಡಿದರೆ ಸಾಕೆಂದು ತೀರ್ಮಾನಿಸಿದ್ದು, ದುರ್ದೈವ. ಅಲ್ಪಸಂಖ್ಯಾತರನ್ನು ಓಲೈಸುವ ನಿಟ್ಟಿನಲ್ಲಿ ಈ ರೀತಿ ನಿರ್ಧಾರ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.
ಕತ್ತಿ ಮಸೆಯುವ ಕೆಲಸ: ಸಚಿವ ಸತೀಶ್ ಜಾರಕಿಹೊಳಿ ಬಗ್ಗೆ ಮಾಹಿತಿ ಇರುವ ಕಾಂಗ್ರೆಸ್ ಪಕ್ಷದವರೇ ಈಡಿಗೆ ಮಾಹಿತಿ ಕೊಟ್ಟು, ಸಿಲುಕಿಸಿರಬಹುದೆಂಬ ಚರ್ಚೆ ನಡೆದಿದೆ. ಈಡಿಗೆ ದೂರು ಕೊಟ್ಟವರ ವಿವರ ಪತ್ತೆ ಹಚ್ಚಬೇಕಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಸತೀಶ್ ಅವರು ಸಿಎಂ ಹುದ್ದೆ ಆಕಾಂಕ್ಷಿಗಳು. ಕಾಂಗ್ರೆಸ್ ಒಳಗಡೆ ಕತ್ತಿ ಮಸೆಯುವ ಕೆಲಸ ಆಗಿದೆಯೇ? ಎಂದು ಅವರು ಸಂಶಯ ವ್ಯಕ್ತಪಡಿಸಿದರು.
ಸತೀಶ್ ಅವರ ನಿವಾಸದ ಮೇಲಿನ ಈಡಿ ದಾಳಿ ಹಿಂದೆ ಬಿಜೆಪಿ ಪಾತ್ರವೇನೂ ಇಲ್ಲ. ಕಾಂಗ್ರೆಸ್ ಆಂತರಿಕ ಕಚ್ಚಾಟ, ಸಿಎಂ ಗಾದಿಗಾಗಿ ಕಾದಾಟದಿಂದ ಪಿತೂರಿ, ಷಡ್ಯಂತ್ರ ನಡೆಯುತ್ತಿದೆಯೇ ಎಂಬ ಚರ್ಚೆಗಳೂ ನಡೆದಿವೆ. ಸಿಎಂ ಸ್ಥಾನದ ವಿಚಾರದಲ್ಲಿ ಮುಳ್ಳಾಗಬಹುದೆಂಬ ಕಾರಣಕ್ಕೆ ಮಾಹಿತಿ ನೀಡಿದ ಬಗ್ಗೆ ಮಾಹಿತಿ ಬರುತ್ತಿದೆ ಎಂದು ಅವರು ಪ್ರತಿಕ್ರಿಯೆ ನೀಡಿದರು.






