ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಫೆ.16ರಂದು ಉಪ ಚುನಾವಣೆ, ಫೆ.20ಕ್ಕೆ ಎಣಿಕೆ

ಸಾಂದರ್ಭಿಕ ಚಿತ್ರ | Photo: PTI
ಬೆಂಗಳೂರು: ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪಚುನಾವಣೆಗೆ ಫೆ.16ರಂದು ನಗರದ 43 ಮತಗಟ್ಟೆಗಳಲ್ಲಿ ಬೆಳಗ್ಗೆ 8ರಿಂದ ಸಂಜೆ 4ಗಂಟೆಯ ವರೆಗೆ ಮತದಾನ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ರವರು ತಿಳಿಸಿದ್ದಾರೆ.
ಬುಧವಾರ ಬೆಂಗಳೂರು ಶಿಕ್ಷಕರ ಕ್ಷೇತ್ರ ಚುನಾವಣೆಯ ಸಂಬಂಧ ಅಂತಿಮ ಹಂತದಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಮಲ್ಲೇಶ್ವರ ಐಪಿಪಿ ಸಭಾಂಗಣದಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ 14,432 ಮತದಾರರಿದ್ದು, ಫೆ.16ರಂದು ಮತದಾನ ನಡೆಯಲಿದೆ. ಮತದಾರರಿಗೆ ವಿಶೇಷ ಸಾಂಧರ್ಭಿಕ ರಜೆ ಘೋಷಣೆ ಮಾಡಲಾಗುತ್ತದೆ ಎಂದರು.
ಮತಗಟ್ಟೆಗಳ ಬಳಿ 144 ಸೆಕ್ಷನ್ ಜಾರಿಯಿರಲಿದ್ದು, ಮತಗಟ್ಟೆಯ 100 ಮೀಟರ್ ಅಂತರದಲ್ಲಿ 5 ಜನಕ್ಕಿಂತ ಹೆಚ್ಚು ಮಂದಿ ಗುಂಪು ಸೇರುವಂತಿಲ್ಲ. ಜೊತೆಗೆ ಮತಗಟ್ಟೆಯ 100 ಮೀಟರ್ ವ್ಯಾಪ್ತಿಯಲ್ಲಿ ಪ್ರಚಾರ ಮಾಡುವಂತಿಲ್ಲ ಎಂದು ತಿಳಿಸಿದರು.
43 ಮತಗಟ್ಟೆಗಳಲ್ಲಿ ಮತದಾನ: ಬೆಂಗಳೂರು ಶಿಕ್ಷಕರ ಕ್ಷೇತ್ರದ 43 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದ್ದು, ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಹಾಗೂ ಮತ ಎಣಿಕೆ ಕೇಂದ್ರವು ಸರಕಾರಿ ಕಲಾ ಕಾಲೇಜು, ನೃಪತುಂಗ ರಸ್ತೆ, ಅಂಬೇಡ್ಕರ್ ವೀಧಿ, ಕೆ.ಆರ್.ವೃತ್ತ, ಸಂಪಂಗಿರಾಮನಗರ, ಬೆಂಗಳೂರು-560001ರಲ್ಲಿ ಸ್ಥಾಪಿಸಲಿದ್ದು, ಫೆ.20ರಂದು ಮತ ಎಣಿಕೆ ನಡೆಯಲಿದೆ ಎಂದು ಹೇಳಿದರು.
ಸಭೆಯಲ್ಲಿ ಚುನಾವಣಾ ವಿಭಾಗದ ವಿಶೇಷ ಆಯುಕ್ತ ಆರ್. ಸೆಲ್ವಮಣಿ ಸೇರಿದಂತೆ ಅಪರ ಜಿಲ್ಲಾ ಚುನಾವಣಾಧಿಕಾರಿಗಳು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
‘ಫೆ.16ರಂದು ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ(ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಬಿಬಿಎಂಪಿ ಹಾಗೂ ರಾಮನಗರ ಜಿಲ್ಲೆ) ಉಪ ಚುನಾವಣೆಯನ್ನು ಘೋಷಿಸಿದ್ದು, ಕ್ಷೇತ್ರಗಳಲ್ಲಿನ ಸರಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳು ಸೇರಿದಂತೆ ಎಲ್ಲ ಶೈಕ್ಷಣಿಕ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಅರ್ಹ ಶಿಕ್ಷಕ ಮತದಾರರು ಮತದಾನ ಮಾಡಲು ಅನುಕೂಲವಾಗುವಂತೆ ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಲು ಸರಕಾರ ಆದೇಶಿಸಿದೆ. ಷರತ್ತಿಗೊಳಪಟ್ಟು ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲು ಅಧಿಕಾರಿವುಳ್ಳ ಅಧಿಕಾರಿಗಳು ಮಂಜೂರು ಮಾಡಬೇಕು ಎಂದು ಆದೇಶ ತಿಳಿಸಿದೆ.







