ಜಾಮೀನು ಅರ್ಜಿ ವಜಾ ಬೆನ್ನಲ್ಲೇ ಶಾಸಕ ಬೈರತಿ ಬಸವರಾಜು ಅವರನ್ನು ಹುಡುಕಾಟ ನಡೆಸುತ್ತಿರುವ ಸಿಐಡಿ

ಬೆಂಗಳೂರು : ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.19ರಂದು ಹೈಕೋರ್ಟ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾ ಮಾಡಿರುವ ಬೆನ್ನಲ್ಲೇ ಶಾಸಕ ಬೈರತಿ ಬಸವರಾಜು ಎಲ್ಲಿದ್ದಾರೆ ಎಂದು ಸಿಐಡಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ.
ಪ್ರಕರಣದಲ್ಲಿ ಐದನೇ ಆರೋಪಿಯಾಗಿರುವ ಬೈರತಿ ಬಸವರಾಜ್ ಈಗಾಗಲೇ ಎರಡು ಬಾರಿ ವಿಚಾರಣೆ ಎದುರಿಸಿದ್ದು, ಈಗ ಬೈರತಿ ಬಸವರಾಜ್‍ಗೆ ಬಂಧನದ ಭೀತಿ ಎದುರಾಗಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸಂಘಟಿತ ಅಪರಾಧ ತಡೆ ಕಾಯ್ದೆ(ಕೋಕಾ)ಅಡಿ ಸಿಐಡಿ ಅಧಿಕಾರಿಗಳು ಹೊರಡಿಸಿರುವ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ. ಆದರೆ, ಕೊಲೆ ಪ್ರಕರಣದ ತನಿಖಾ ಹಂತದಲ್ಲಿರುವ ಪರಿಣಾಮ ನಿರೀಕ್ಷಣಾ ಜಾಮೀನು ನೀಡಲು ನ್ಯಾಯಾಲಯ ಡಿ.19ರಂದು ನಿರಾಕರಿಸಿತ್ತು.
ಇದರಿಂದ ಸಿಡಿಐ ಅಧಿಕಾರಿಗಳು ಪ್ರಕರಣ ತನಿಖೆ ಚುರುಕುಗೊಳಿಸಿದ್ದು, ಪ್ರಕರಣದ ಆರೋಪಿಯಾಗಿರುವ ಬೈರತಿ ಬಸವರಾಜು ಅವರ ಹುಡುಕಾಟಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಬೈರತಿ ನಗರದಲ್ಲಿ ಇಲ್ಲವೆಂಬ ಮಾಹಿತಿ ಲಭ್ಯವಾಗಿರುವ ಹಿನ್ನೆಲೆ ಸಿಐಡಿ ಅಧಿಕಾರಿಗಳ ತಂಡ ಗೋವಾ, ಪುಣೆ ಸೇರಿದಂತೆ ಅಕ್ಕಪಕ್ಕದ ರಾಜ್ಯಗಳಲ್ಲಿ ಹುಡುಕಾಟ ನಡೆಸುತ್ತಿದೆ. ಇನ್ನೂ ಶಾಸಕರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.





