ರಾಜ್ಯದಲ್ಲಿ 11 ಲಕ್ಷ ಶ್ವಾನಗಳಿಗೆ ಉಚಿತ ರೇಬೀಸ್ ಲಸಿಕೆ ನೀಡುವ ಗುರಿ : ಸಿ.ಪುಟ್ಟರಂಗಶೆಟ್ಟಿ

ಬೆಂಗಳೂರು : ರೇಬೀಸ್ ಮುಕ್ತ ಸಮಾಜ ನಿರ್ಮಾಣದ ನಿಟ್ಟಿನಲ್ಲಿ ಪ್ರಸಕ್ತ ಸಾಲಿನಲ್ಲಿ (2026-27) ರಾಜ್ಯಾದ್ಯಂತ ಒಟ್ಟು 11 ಲಕ್ಷ ಸಾಕು ನಾಯಿಗಳಿಗೆ ಉಚಿತವಾಗಿ ರೇಬೀಸ್ ಲಸಿಕೆ ನೀಡುವ ಗುರಿಯನ್ನು ಪಶುಪಾಲನಾ ಇಲಾಖೆ ಹೊಂದಿದೆ ಎಂದು ಪಶುಸಂಗೋಪನೆ ಇಲಾಖೆ ಸಚಿವ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.
ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆ, ಭಾರತೀಯ ವಿಜ್ಞಾನ ಸಂಸ್ಥೆ, ಬೆಸ್ಟ್ ಕ್ಲಸ್ಟರ್, ಕೆವಿಎಎಫ್‍ಎಸ್‍ಯು ಹಾಗೂ ಮಿಷನ್ ರೇಬೀಸ್ ಸಂಸ್ಥೆಗಳ ಸಹಯೋಗದಲ್ಲಿ ಸೋಮವಾರ ನಗರದ ಐಐಎಸ್‍ಸಿ ಆವರಣದಲ್ಲಿರುವ ಎ.ವಿ. ರಾಮಾರಾವ್ ಸಭಾಂಗಣದಲ್ಲಿ ನಡೆದ ‘ವಿಶ್ವ ರೇಬೀಸ್ ದಿನ-2026’ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರೇಬೀಸ್ ಒಂದು ಭಯಾನಕ ಹಾಗೂ ಮಾರಣಾಂತಿಕ ರೋಗವಾಗಿದ್ದು, ಒಮ್ಮೆ ಲಕ್ಷಣಗಳು ಕಾಣಿಸಿಕೊಂಡರೆ ಸಾವು ಖಚಿತ. ಆದ್ದರಿಂದ, ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸುವುದು ಮತ್ತು ಸೋಂಕಿತ ಪ್ರಾಣಿಗಳ ಕಚ್ಚುವಿಕೆಯಿಂದ ರಕ್ಷಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ ಎಂದು ಪುಟ್ಟರಂಗಶೆಟ್ಟಿ ಹೇಳಿದರು.
ಮಕ್ಕಳು ನಾಯಿಗಳೊಂದಿಗೆ ಹೆಚ್ಚು ಬೆರೆಯುವುದರಿಂದ ಅವರು ಈ ರೋಗಕ್ಕೆ ತುತ್ತಾಗುವ ಅಪಾಯ ಹೆಚ್ಚು. 2024-25ನೇ ಸಾಲಿನಲ್ಲಿ 5,541 ಶಾಲಾ-ಕಾಲೇಜುಗಳಲ್ಲಿ ಅರಿವು ಮೂಡಿಸಿ 6,62,183 ಸಾಕು ನಾಯಿಗಳಿಗೆ ಹಾಗೂ 2025-26ನೇ ಸಾಲಿನಲ್ಲಿ 9,175 ಶಾಲೆಗಳಲ್ಲಿ ಜಾಗೃತಿ ಮೂಡಿಸಿ 9,51,593 ನಾಯಿಗಳಿಗೆ ಲಸಿಕೆ ಹಾಕಲಾಗಿದೆ. ಪ್ರಸಕ್ತ ವರ್ಷ (2026-27) ಈಗಾಗಲೇ 7,200 ಶಾಲಾ-ಕಾಲೇಜುಗಳಲ್ಲಿ ಸುಮಾರು 5 ಲಕ್ಷ ವಿದ್ಯಾರ್ಥಿಗಳು ಹಾಗೂ 32,000 ಶಿಕ್ಷಕರಿಗೆ ರೇಬೀಸ್ ಕುರಿತು ಅರಿವು ಮೂಡಿಸಲಾಗಿದೆ ಎಂದು ಪುಟ್ಟರಂಗಶೆಟ್ಟಿ ವಿವರಿಸಿದರು.
11 ಲಕ್ಷ ಡೋಸ್ ಲಸಿಕೆ ಲಭ್ಯ: ಪಶುಪಾಲನಾ ಇಲಾಖೆಯ 2,500 ಮುಂಚೂಣಿ ಕಾರ್ಯಕರ್ತರು ಈ ಲಸಿಕಾ ಅಭಿಯಾನದಲ್ಲಿ ಶ್ರಮಿಸುತ್ತಿದ್ದಾರೆ. ಈ ಅಭಿಯಾನಕ್ಕಾಗಿ ಡಬ್ಲ್ಯೂ.ವಿ.ಎಸ್ ಮತ್ತು ರೇಬೀಸ್ ಅಂಡ್ ಕೇರ್ ಸಂಸ್ಥೆಯು 1 ಲಕ್ಷ ಡೋಸ್ ಲಸಿಕೆಯನ್ನು ಉಚಿತವಾಗಿ ನೀಡುತ್ತಿದ್ದು, ಇಲಾಖೆಯ ವತಿಯಿಂದ ‘ಅಸ್ಕಾಡ್’ ಯೋಜನೆಯಡಿ 10 ಲಕ್ಷ ಡೋಸ್ ಲಸಿಕೆಗಳನ್ನು ಒದಗಿಸಲಾಗಿದೆ ಎಂದು ಪುಟ್ಟರಂಗಶೆಟ್ಟಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಐಐಎಸ್‍ಸಿ ಬಯೋಕೆಮಿಸ್ಟ್ರಿ ವಿಭಾಗದ ಪ್ರೊ ಫೆಸರ್ ಡಾ.ಉತ್ಪಲ್ ಎಸ್.ಟಾಟು, ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆ ಆಯುಕ್ತ ಲಿಂಗರಾಜ ಎಸ್.ಎಸ್., ಕೆವಿಎಎಫ್‍ಎಸ್‍ಯು ಕುಲಪತಿ ಪ್ರೊ.ಕೆ.ಸಿ.ವೀರಣ್ಣ, ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆ ನಿರ್ದೇಶಕ ಡಾ.ಪಿ.ಶ್ರೀನಿವಾಸು, ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಪ್ರಾದೇಶಿಕ ಅಧಿಕಾರಿ ಯಶವಂತ್ ಶೇಣೈ, ಪಶುವೈದ್ಯಕೀಯ ಕಾಲೇಜು ಡೀನ್ ಪೆÇ್ರ.ಆರ್.ನಾಗರಾಜ, ಇಂಡಿಯನ್ ಇಮ್ಯುನೊಲಾಜಿಕಲ್ಸ್ ಲಿಮಿಟೆಡ್‍ನ ಹಿರಿಯ ಉಪಾಧ್ಯಕ್ಷ ಡಾ.ಎನ್.ಎಸ್.ಎನ್.ಭಾರ್ಗವ, ಕಿಮ್ಸ್ ಕಮ್ಯೂನಿಟಿ ವೈದ್ಯಕೀಯ ವಿಭಾಗದ ಪ್ರೊ.ಡಿ.ಎಚ್.ಅಶ್ವಥ್‍ನಾರಾಯಣ ಉಪಸ್ಥಿತರಿದ್ದರು.






