ಹಿರಿಯೂರಿನ ಧರ್ಮಪುರ ಹೋಬಳಿಯ 14 ಕೆರೆಗಳಿಗೆ ನೀರು ತುಂಬಿಸುವ 35 ಕೋಟಿ ರೂ. ಯೋಜನೆಗೆ ಸಚಿವ ಸಂಪುಟ ಅನುಮೋದನೆ : ಡಾ.ಅಜಯ್ ಸಿಂಗ್

ಡಾ.ಅಜಯ್ ಧರ್ಮಸಿಂಗ್
ಬೆಂಗಳೂರು : ಚಿತ್ರದುರ್ಗ ಜಿಲ್ಲೆಯ ಅತಿ ಹಿಂದುಳಿದ ಹಿರಿಯೂರು ತಾಲೂಕಿನ ಧರ್ಮಪುರ ಹೋಬಳಿಯ 14 ಕೆರೆಗಳನ್ನು ತುಂಬಿಸುವ 35 ಕೋಟಿ ರೂ. ಅಂದಾಜು ಮೊತ್ತದ ಏತ ನೀರಾವರಿ ಯೋಜನೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಅಜಯ್ ಧರ್ಮಸಿಂಗ್ ತಿಳಿಸಿದ್ದಾರೆ.
ಅತಿ ಹಿಂದುಳಿದ ಹಿರಿಯೂರು ತಾಲೂಕು ಮಳೆಯ ಕೊರತೆ ಹಾಗೂ ನಿರಂತರ ಅಂತರ್ಜಲ ಕುಸಿತವನ್ನು ಎದುರಿಸುತ್ತಿದೆ. ಧರ್ಮಪುರ ಹೋಬಳಿಯ ಹಲವು ಕೆರೆಗಳು ವರ್ಷಗಳಿಂದ ಸಮರ್ಪಕವಾಗಿ ತುಂಬಿಲ್ಲ. ಈ ಭಾಗದಲ್ಲಿ ಕೆರೆ-ಕಟ್ಟೆಗಳು ಜನರು ಹಾಗೂ ರೈತರ ಜೀವನಾಡಿಯಾಗಿರುವ ಹಿನ್ನೆಲೆಯಲ್ಲಿ ಅವುಗಳನ್ನು ಮರುಪೂರಣಗೊಳಿಸುವ ಉದ್ದೇಶದಿಂದ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಯೋಜನೆಯಡಿ ಧರ್ಮಪುರ ಕೆರೆಯಿಂದ ಏತ ನೀರಾವರಿ ಮೂಲಕ ಹಲಗಲದ್ದಿ, ಮುದ್ದಿಹಳ್ಳಿ, ಖಂಡೇನಹಳ್ಳಿ, ಬೇತೂರು ಸೇರಿದಂತೆ ಒಟ್ಟು 14 ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ. ಮಾರ್ಗಮಧ್ಯೆ ಬರುವ ಗೋಕಟ್ಟೆಗಳಿಗೂ ನೀರು ತಲುಪಿಸುವ ಉದ್ದೇಶ ಹೊಂದಲಾಗಿದೆ.
ಈ ಭಾಗದಲ್ಲಿ ಕುಡಿಯುವ ನೀರಿನ ಭದ್ರತೆ, ಅಂತರ್ಜಲ ಮರುಪೂರಣ ಹಾಗೂ ಕೃಷಿ ಚಟುವಟಿಕೆಗಳಿಗೆ ದೀರ್ಘಕಾಲಿಕ ನೆರವು ಒದಗಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಕೆರೆಗಳನ್ನು ತುಂಬಿಸುವುದರಿಂದ ಕೇವಲ ಮೇಲ್ಮೈ ನೀರಿನ ಲಭ್ಯತೆ ಹೆಚ್ಚುವುದಲ್ಲದೆ, ಸುತ್ತಮುತ್ತಲಿನ ಕೊಳವೆಬಾವಿಗಳು ಹಾಗೂ ಕೃಷಿಭೂಮಿಗಳಿಗೂ ನೇರ ಪ್ರಯೋಜನವಾಗಲಿದೆ ಎಂದು ಡಾ.ಅಜಯ್ ಧರ್ಮಸಿಂಗ್ ತಿಳಿಸಿದ್ದಾರೆ.
2025–26ನೇ ಸಾಲಿನ ಅಂತರ್ಜಲ ಮೌಲ್ಯಮಾಪನ ವರದಿಯ ಪ್ರಕಾರ ಹಿರಿಯೂರು ತಾಲೂಕು ‘ಓವರ್ ಎಕ್ಸ್ಪ್ಲಾಯಿಟೆಡ್’ (ಅಂತರ್ಜಲದ ಅತಿಯಾದ ಬಳಕೆ) ಪ್ರದೇಶವಾಗಿ ಗುರುತಿಸಲ್ಪಟ್ಟಿದೆ. ಹೀಗಾಗಿ ಅಂತರ್ಜಲ ಮರುಪೂರಣ ಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದೆ ಎಂದು ಸಚಿವರು ಹೇಳಿದ್ದಾರೆ.
ಈ ಯೋಜನೆಯ ಮೂಲಕ ವೇದಾವತಿ ನದಿಯಿಂದ 66.19 ಎಂ.ಸಿ.ಎಫ್.ಟಿ. ನೀರನ್ನು ಕೆರೆಗಳಿಗೆ ತುಂಬಿಸಲು ಉದ್ದೇಶಿಸಲಾಗಿದೆ.
ಯೋಜನೆಯ ವ್ಯಾಪ್ತಿಯಲ್ಲಿ ಹಲಗಲದ್ದಿ ಕೆರೆ, ಮುದ್ದಿಹಳ್ಳಿ ಕೆರೆ, ಮುದ್ದಿಹಳ್ಳಿ ಕಿವುಡನಕಟ್ಟೆ ಕೆರೆ, ಖಂಡೇನಹಳ್ಳಿ ಕೆರೆ, ಹರಳೀಕೆರೆ-1, ಹರಳೀಕೆರೆ-2, ಹರಳೀಕೆರೆ-3, ಹರಳೀಕೆರೆ-4, ಹೊಸಕೆರೆ, ಬೇತೂರು ಕೆರೆ, ಬೆನಕನಹಳ್ಳಿ ಕೆರೆ, ಸಕ್ಕರೆ ಕೆರೆ-1 ಹಾಗೂ ಸಕ್ಕರೆ ಕೆರೆ-2 ಸೇರಿದಂತೆ ಕೆರೆಗಳನ್ನು ಸೇರಿಸಲಾಗಿದೆ.
ಬರಪೀಡಿತ ಪ್ರದೇಶಗಳಲ್ಲಿ ಕೆರೆಗಳನ್ನು ತುಂಬಿಸಿ ಅಂತರ್ಜಲವನ್ನು ಮರುಪೂರಣಗೊಳಿಸುವುದು ನಮ್ಮ ಇಲಾಖೆಯ ಪ್ರಮುಖ ಆದ್ಯತೆಯಾಗಿದೆ. ಈ 35 ಕೋಟಿ ರೂ. ಯೋಜನೆಯು ಧರ್ಮಪುರ ಭಾಗದ ಜಲಭದ್ರತೆಯನ್ನು ಬಲಪಡಿಸುವ ಮಹತ್ವದ ಹೆಜ್ಜೆಯಾಗಲಿದೆ ಎಂದು ಡಾ.ಅಜಯ್ ಧರ್ಮಸಿಂಗ್ ತಿಳಿಸಿದ್ದಾರೆ.






