ಧಾರವಾಡದಲ್ಲಿ ಡಿಜಿಟಲ್ ತಾರಾಲಯ ನಿರ್ಮಾಣಕ್ಕೆ ಸಂಪುಟ ಅಸ್ತು : ಸಚಿವ ಭೋಸರಾಜು

ಬೆಂಗಳೂರು ಮೇ 8: ಉತ್ತರ ಕರ್ನಾಟಕದ ವಿದ್ಯಾರ್ಥಿಗಳಲ್ಲಿ ಖಗೋಳ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವ ಮಹತ್ವಾಕಾಂಕ್ಷೆಯ ‘ಧಾರವಾಡ ಡಿಜಿಟಲ್ ತಾರಾಲಯ' ನಿರ್ಮಾಣಕ್ಕೆ ಎದುರಾಗಿದ್ದ ತಾಂತ್ರಿಕ ಅಡೆತಡೆಗಳು ನಿವಾರಣೆಯಾಗಿವೆ. ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದ ಆವರಣದಲ್ಲಿ 2ಡಿ 4ಕೆ ರೆಸಲ್ಯೂಷನ್‍ನ ಡಿಜಿಟಲ್ ತಾರಾಲಯ ಸ್ಥಾಪನೆಗೆ ಸಂಪುಟ ಸಭೆಯು ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್ ಭೋಸರಾಜು ತಿಳಿಸಿದ್ದಾರೆ.
ಶುಕ್ರವಾರ ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, 2017ರಲ್ಲಿ ಈ ವಿಜ್ಞಾನ ಕೇಂದ್ರದ ಆವರಣದಲ್ಲಿ 15 ಮೀಟರ್ ಸುತ್ತಳತೆಯ 3ಆ 8ಏ ತಾರಾಲಯ ನಿರ್ಮಾಣಕ್ಕಾಗಿ ಸರಕಾರ 22ಕೋಟಿ ರೂ. ಅನುಮೋದನೆ ನೀಡಿತ್ತು. ಇದರಲ್ಲಿ 9.31 ಕೋಟಿ ರೂ.ವೆಚ್ಚದಲ್ಲಿ ಕಟ್ಟಡ ನಿರ್ಮಾಣ, ಸೆಪ್ಟಿಕ್ ಟ್ಯಾಂಕ್, ಫಾಲ್ಸ್ ಸೀಲಿಂಗ್ ಸೇರಿದಂತೆ ಬಹುತೇಕ ಸಿವಿಲ್ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿವೆ.
ಆದರೆ, ಕೋವಿಡ್-19 ಸಂಕಷ್ಟ ಹಾಗೂ ತಾರಾಲಯದ ಉಪಕರಣಗಳ ಬೆಲೆ ವಿಪರೀತವಾಗಿ ಏರಿಕೆಯಾದ ಕಾರಣ (ಕೇವಲ ಉಪಕರಣಗಳಿಗೆ 29.5 ಕೋಟಿ ರೂ.ಅಂದಾಜಿಸಲಾಗಿತ್ತು) ಈ ಯೋಜನೆಯನ್ನು 2020ರಲ್ಲಿ ಸ್ಥಗಿತಗೊಳಿಸಲಾಗಿತ್ತು. ಯೋಜನೆ ವಿಳಂಬವಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು, ತಜ್ಞರ ಸಮಿತಿಯ ಶಿಫಾರಸಿನ ಮೇರೆಗೆ ಲಭ್ಯವಿರುವ ಉಳಿಕೆ ಅನುದಾನದಲ್ಲೇ ಅತ್ಯಾಧುನಿಕ 2ಡಿ 4ಡಿ ಪ್ರೊಜೆಕ್ಷನ್ ಸಿಸ್ಟಮ್, ಡೋಮ್, ಸಾಫ್ಟ್ ವೇರ್ ಹಾಗೂ ಆಡಿಯೋ ವ್ಯವಸ್ಥೆಯನ್ನು ಅಳವಡಿಸಲು ನಿರ್ಧರಿಸಿದೆ.
ಇದೀಗ ಈ ಪರಿಷ್ಕೃತ ಪ್ರಸ್ತಾವನೆಗೆ ಹಣಕಾಸು ಇಲಾಖೆ ಹಾಗೂ ಸಂಪುಟ ಒಪ್ಪಿಗೆ ಸೂಚಿಸಿದ್ದು, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೊ ತ್ಸಾಹಕ ಸೊಸೈಟಿ ಮೂಲಕ ಶೀಘ್ರವೇ ಉಪಕರಣಗಳ ಖರೀದಿಗೆ ಚಾಲನೆ ಸಿಗಲಿದೆ ಎಂದು ಅವರು ತಿಳಿಸಿದ್ದಾರೆ.
‘ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಡಿಜಿಟಲ್ ತಾರಾಲಯ ನಿರ್ಮಾಣ ಕಾರ್ಯ ಉಪಕರಣಗಳ ಬೆಲೆ ಏರಿಕೆಯಿಂದಾಗಿ ನೆನೆಗುದಿಗೆ ಬಿದ್ದಿತ್ತು. ಉತ್ತರ ಕರ್ನಾಟಕದ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಒಲವು ಮೂಡಿಸಲು ಈ ತಾರಾಲಯ ಅತ್ಯಗತ್ಯ. ಹೀಗಾಗಿ ವಿಳಂಬ ಮಾಡದೆ, ಆರ್ಥಿಕ ಹೊರೆಯೂ ಆಗದಂತೆ, ಲಭ್ಯವಿರುವ ಅನುದಾನದಲ್ಲೇ ಅತ್ಯಾಧುನಿಕ 2ಡಿ 4ಕೆ ತಾರಾಲಯ ನಿರ್ಮಾಣಕ್ಕೆ ಸಂಪುಟ ಅನುಮೋದನೆ ಪಡೆಯಲಾಗಿದೆ. ಬಾಕಿಯಿರುವ ಕಾಮಗಾರಿ ಹಾಗೂ ಉಪಕರಣಗಳ ಅಳವಡಿಕೆ ಕಾರ್ಯವನ್ನು ಶೀಘ್ರವೇ ಪೂರ್ಣಗೊಳಿಸಿ ವಿದ್ಯಾರ್ಥಿಗಳಿಗೆ ಸಮರ್ಪಿಸಲಾಗುವುದು’
-ಎನ್.ಎಸ್. ಭೋಸರಾಜು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ






