ಎಸ್ಸಿ/ಎಸ್ ಟಿ ಮೀಸಲಾತಿ ಪ್ರಮಾಣ ಹೆಚ್ಚಳ ರದ್ದತಿಯಿಂದ ಶೋಷಿತ ಸಮುದಾಯಗಳ ಘನತೆಯ ಬದುಕಿನ ಕನಸಿಗೆ ಘಾಸಿ: ಸಿದ್ದರಾಮಯ್ಯ

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಹೆಚ್ಚಳದ ನಿರ್ಧಾರವನ್ನು ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್ ತೀರ್ಪು, ಹಲವು ತಲೆಮಾರುಗಳಿಂದ ಸಮಾನ ಅವಕಾಶ ವಂಚಿತವಾಗಿದ್ದ ಶೋಷಿತ ಸಮುದಾಯಗಳ ಘನತೆಯ ಬದುಕಿನ ಕನಸಿಗೆ ಘಾಸಿಯುಂಟು ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನ್ಯಾಯಾಲಯದ ತೀರ್ಪಿನ ಬಗ್ಗೆ ಗೌರವವನ್ನು ವ್ಯಕ್ತಪಡಿಸುತ್ತಲೇ, ಸಾಮಾಜಿಕ ನ್ಯಾಯದ ವಿಚಾರದಲ್ಲಿ ಅಂದಿನ ಬಿಜೆಪಿ ಸರ್ಕಾರವು ಪೂರ್ವ ತಯಾರಿ ಇಲ್ಲದೆ ಅವಸರದಲ್ಲಿ ಮೀಸಲಾತಿ ಹೆಚ್ಚಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮಾಡಿರುವ ಅನ್ಯಾಯವನ್ನು ಖಂಡಿಸುತ್ತೇನೆ ಎಂದವರು ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ಇಂದಿರಾ ಸಹಾನಿ ಪ್ರಕರಣದಲ್ಲಿ ಒಟ್ಟು ಮೀಸಲಾತಿಯು ಶೇ. 50ರ ಮಿತಿಯನ್ನು ಮೀರಬಾರದು ಎಂದು ನೀಡಿದ್ದ ತೀರ್ಪಿನ ಅರಿವಿದ್ದರೂ, ಬಿಜೆಪಿ ಸರ್ಕಾರ 2023ರ ವಿಧಾನಸಭಾ ಚುನಾವಣೆಗೂ ಮುನ್ನ ಪರಿಶಿಷ್ಟ ಜಾತಿ ಮೀಸಲಾತಿಯನ್ನು ಶೇ.15ರಿಂದ ಶೇ. 17ಕ್ಕೆ ಮತ್ತು ಪರಿಶಿಷ್ಟ ಪಂಗಡ ಮೀಸಲಾತಿಯನ್ನು ಶೇ. 3ರಿಂದ ಶೇ. 7ಕ್ಕೆ ಹೆಚ್ಚಿಸಿದ್ದು ಈಗಿನ ಅವಾಂತರಕ್ಕೆ ಕಾರಣ.
ಮೀಸಲಾತಿ ಹೆಚ್ಚಳಕ್ಕೆ ಸೂಕ್ತ ಸಾಂವಿಧಾನಿಕ ರಕ್ಷಣೆಯನ್ನು ನೀಡದೆ ಆತುರವಾಗಿ ಜಾರಿ ಮಾಡಿದ್ದೇಕೆ? ಸಾಮಾಜಿಕ ನ್ಯಾಯದ ಪಾಲನೆಗಿಂತ ಚುನಾವಣಾ ಲಾಭವೇ ಬಿಜೆಪಿಗೆ ಮುಖ್ಯವಾಗಿತ್ತೆ? ಎಂದು ಅವರು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಚಿಸಲಾಗಿದ್ದ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿಯು ಮೀಸಲಾತಿ ಹೆಚ್ಚಳಕ್ಕೆ ಅಗತ್ಯವಾದ ಬುನಾದಿಯನ್ನು ಒದಗಿಸಿತ್ತು. ಮೀಸಲಾತಿ ಹೆಚ್ಚಳದ ಬೇಡಿಕೆಯ ಈಡೇರಿಕೆಯಾಗಿದ್ದು ಯಾವುದೇ ಪಕ್ಷದ ರಾಜಕೀಯ ಔದಾರ್ಯದಿಂದ ಅಲ್ಲ, ಬದಲಾಗಿ ಅವಕಾಶ ವಂಚಿತ ಸಮುದಾಯಗಳ ದಶಕಗಳ ಹೋರಾಟದ ಫಲವಾಗಿ ಬಂದಿದ್ದಾಗಿದೆ. ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇರುವ ಕಾರಣವನ್ನೊಡ್ಡಿ, ಮೀಸಲಾತಿ ಹೆಚ್ಚಳವನ್ನು ಸಂವಿಧಾನದ 9ನೇ ಶೆಡ್ಯೂಲ್ ಗೆ ಸೇರಿಸುವ ಕರ್ನಾಟಕದ ಮನವಿಯನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತಿರಸ್ಕರಿಸಿತ್ತು. ಹಾಗಾಗಿ ಈಗ ಕೇಂದ್ರ ಸರ್ಕಾರವು ಮೀಸಲಾತಿ ಹೆಚ್ಚಳದ ವಿಚಾರವಾಗಿ ಸಾಂವಿಧಾನಿಕ ಪರಿಹಾರ ಏನು ಎಂಬುದನ್ನು ಕೂಡ ಸ್ಪಷ್ಟಪಡಿಸಬೇಕಿದೆ ಎಂದವರು ಒತ್ತಾಯಿಸಿದ್ದಾರೆ.
ಅಹಿಂದ ವರ್ಗಗಳಾದ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರಿಗೆ ಸೂಕ್ತ ಮೀಸಲಾತಿ ಸೌಲಭ್ಯ ದೊರೆತು, ಅವರು ಸಮಾಜದ ಮುಖ್ಯವಾಹಿನಿಗೆ ಬರಬೇಕು, ಇದರಲ್ಲಿ ಯಾವುದೇ ರಾಜಿಯಿಲ್ಲ. ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯಿಲ್ಲದೆ ರಾಜಕೀಯ ಪ್ರಜಾಪ್ರಭುತ್ವ ಅಪೂರ್ಣ ಎನ್ನುವುದು ತನ್ನ ದೃಢ ನಂಬಿಕೆ. ಮೀಸಲಾತಿ ಎಂಬುದು ದಾನವಲ್ಲ. ಇದು ಅನಾದಿ ಕಾಲದ ಅನ್ಯಾಯವನ್ನು ಸರಿಪಡಿಸಲು ಮತ್ತು ಶೋಷಿತ ವರ್ಗಗಳಿಗೆ ಸೂಕ್ತ ಪ್ರಾತಿನಿಧ್ಯವನ್ನು ಕಲ್ಪಿಸಲು ಇರುವ ಒಂದು ಸಾಂವಿಧಾನಿಕ ಸಾಧನವಾಗಿದೆ. ಕೇಂದ್ರ ಸರ್ಕಾರವು ಶೇ. 50ರ ಮಿತಿಗೆ ಜೋತುಬೀಳದೆ , ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಹೆಚ್ಚಿಸಿ ಅದನ್ನು ಸಂವಿಧಾನದ 9ನೇ ಶೆಡ್ಯೂಲ್ ಸೇರಿಸಿ ರಕ್ಷಣೆ ನೀಡಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಹೆಚ್ಚಿಸಲಾದ ಮೀಸಲಾತಿಯನ್ನು ಅದೇ ಪ್ರಮಾಣದಲ್ಲಿ ಉಳಿಸಲು ಹಾಗೂ ನ್ಯಾಯಾಲಯದ ಆದೇಶದಿಂದ ತೊಂದರೆಗೀಡಾಗುವ ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳ ಹಿತವನ್ನು ಕಾಪಾಡಲು ಕರ್ನಾಟಕ ಸರ್ಕಾರವು ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದವರು ಆಗ್ರಹಿಸಿದರು.






