362 ಗೆಜೆಟೆಡ್ ಪ್ರೊಬೇಷನರ್‌ಗಳ ನೇಮಕಾತಿ ಪ್ರಕರಣ : ತನಿಖೆ ಸಿಬಿಐಗೆ ವಹಿಸಲು ಒತ್ತಾಯ

ಬೆಂಗಳೂರು : ಕರ್ನಾಟಕ ಲೋಕ ಸೇವಾ ಆಯೋಗದ(ಕೆಪಿಎಸ್‌ಸಿ) ಮೂಲಕ ನಡೆದ 362 ಗೆಜೆಟೆಡ್ ಪ್ರೊಬೇಷನರ್‌ಗಳ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ತಕ್ಷಣವೇ ಅನುಷ್ಠಾನಗೊಳಿಸಬೇಕು ಹಾಗೂ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ‘ನೈಜ್ಯ ಹೋರಾಟಗಾರರ ವೇದಿಕೆ’ಯು ಒತ್ತಾಯಿಸಿದೆ.
ಶನಿವಾರ ಈ ಸಂಬಂಧ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿರುವ ವೇದಿಕೆಯ ಸಂಚಾಲಕ ಎಚ್. ಎಂ.ವೆಂಕಟೇಶ್, ಎಲ್ಲ 362 ಅಧಿಕಾರಿಗಳ ನೇಮಕಾತಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪನ್ನು ಹಾಗೂ ಅದರ ಎಲ್ಲ ನಿರ್ದೇಶನಗಳೊಂದಿಗೆ ಸಂಪೂರ್ಣವಾಗಿ ಜಾರಿಗೊಳಿಸಬೇಕು ಎಂದಿದ್ದಾರೆ.
ತೀರ್ಪಿಗೆ ವಿರುದ್ಧವಾಗಿ ಯಾವುದೇ ನೇಮಕಾತಿ ಅಥವಾ ಅಧಿಕಾರದಲ್ಲಿ ಮುಂದುವರಿಯಲು ಅನುಮತಿಸಬಾರದು. ಪ್ರಸ್ತುತ ಚಾಲ್ತಿಯಲ್ಲಿರುವ ನೇಮಕಾತಿ ನಿಯಮಗಳು ಮತ್ತು ಸುಪ್ರೀಂ ಕೋರ್ಟ್‌ನ ನಿರ್ದೇಶನಗಳ ಪ್ರಕಾರ ಖಾಲಿ ಇರುವ ಗ್ರೂಪ್ ’ಎ’ ಮತ್ತು ಗ್ರೂಪ್ ‘ಬಿ’ ಹುದ್ದೆಗಳಿಗೆ ಹೊಸ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು ಅವರು ಮನವಿ ಮಾಡಿದ್ದಾರೆ.
ಈ ಹಿಂದೆ ಇದೇ ನೇಮಕಾತಿಗೆ ಸಂಬಂಧಿಸಿ ಸಿಬಿಐ ತನಿಖೆಗಾಗಿ ಅಡ್ವೊಕೇಟ್ ಜನರಲ್ ನೀಡಿದ್ದ ಶಿಫಾರಸನ್ನು ಏಕೆ ಜಾರಿಗೊಳಿಸಲಾಗಿಲ್ಲ ಎಂಬುದರ ಕುರಿತು ಔಪಚಾರಿಕ ಪರಿಶೀಲನೆ ನಡೆಸಬೇಕು. ಸಂಬಂಧಿತ ನಿರ್ಧಾರಗಳನ್ನು ತೆಗೆದುಕೊಂಡ ಅಧಿಕಾರಿಗಳನ್ನು ಗುರುತಿಸಬೇಕು. ಪ್ರಕರಣದಲ್ಲಿ ದೂರುದಾರರು ಮತ್ತು ಸಾಕ್ಷಿಗಳನ್ನು ರಕ್ಷಿಸಬೇಕು. ನೇಮಕಾತಿಗೆ ಸಂಬಂಧಿಸಿದ ಎಲ್ಲ ಲಭ್ಯವಿರುವ ಪರೀಕ್ಷಾ ದಾಖಲೆಗಳು, ಸಂದರ್ಶನ ದಾಖಲೆಗಳು, ಮೌಲ್ಯಮಾಪನ ಹಾಳೆಗಳು, ಇಲೆಕ್ಟ್ರಾನಿಕ್ ದಾಖಲೆಗಳು, ತನಿಖಾ ಕಡತಗಳು ಮತ್ತು ಸರಕಾರಿ ಪತ್ರವ್ಯವಹಾರಗಳ ಸಂರಕ್ಷಣೆಗಾಗಿ ನಿರ್ದೇಶನಗಳನ್ನು ಹೊರಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.






