ಬೆಂಗಳೂರು | ಆನ್ಲೈನ್ನಲ್ಲಿ ನಕಲಿ ಕಾನೂನು ಸೇವೆ : 1.50 ಕೋಟಿ ರೂ. ಅಕ್ರಮ ಬಯಲಿಗೆಳೆದ ಸಿಸಿಬಿ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ಆನ್ಲೈನ್ನಲ್ಲಿ ನಕಲಿ ಕಾನೂನು ಸೇವೆ ಒದಗಿಸುತ್ತಿದ್ದ ಪ್ರಕರಣದಡಿ ಇಬ್ಬರು ಸಹೋದರರ ದೊಡ್ಡ ಸೈಬರ್ ಅಪರಾಧ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಬೆಂಗಳೂರಿನ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ರಾಷ್ಟ್ರೀಯ ಸೈಬರ್ ಕ್ರೈಂ ಪೋರ್ಟಲ್ ಮೂಲಕ ದಾಖಲಾದ ದೂರಿನ ಮೇರೆಗೆ ಸಿಸಿಬಿ ಪೊಲೀಸರು ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಂಡು ಆರೋಪಿಗಳ ಜಾಲವನ್ನು ಪತ್ತೆ ಹಚ್ಚಿದ್ದಾರೆ.
ಬೆಂಗಳೂರಿನ ಕಸ್ತೂರಿನಗರದಲ್ಲಿ ‘ಇಂಡಿಯನ್ ಲೀಗಲ್ ಸರ್ವಿಸ್’ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾಲ್ಸೆಂಟರ್ ಪತ್ತೆಯಾಗಿದೆ. ಈ ಕಂಪೆನಿಯಲ್ಲಿ 12 ಟೆಲಿಕಾಲರ್ಗಳನ್ನು ನೇಮಿಸಿಕೊಂಡು, ಸೈಬರ್ ವಂಚನೆಗೆ ಒಳಗಾದ ಸಾರ್ವಜನಿಕರಿಗೆ ಕರೆ ಮಾಡಿ ಹಣ ಹಿಂದಿರುಗಿಸಿಕೊಡುವ ಭರವಸೆ ನೀಡಿ ಹಣ ಪಡೆದು ವಂಚಿಸಲಾಗುತ್ತಿತ್ತು ಎಂಬುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.
ಕಾಲ್ಸೆಂಟರ್ನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಆರೋಪಿಯ ಸಹೋದರ ದುಬೈನಲ್ಲಿದ್ದು ಹಲವಾರು ನಕಲಿ ಕಂಪೆನಿಗಳನ್ನು ಸ್ಥಾಪಿಸಿ ಆನ್ಲೈನ್ ವಂಚನೆ ನಡೆಸುವ ಜಾಲವೊಂದನ್ನು ನಿರ್ಮಿಸಿದ್ದನು ಎಂಬುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಕಾಲ್ಸೆಂಟರ್ನಲ್ಲಿದ್ದ 10 ಕಂಪ್ಯೂಟರ್ ಹಾರ್ಡ್ ಡಿಸ್ಕ್ ಗಳು, 7 ನಕಲಿ ಕಂಪೆನಿಗಳ ಸೀಲುಗಳು, ಬಾಡಿಗೆ ಒಪ್ಪಂದ ಪತ್ರಗಳು, ಚೆಕ್ಬುಕ್ಗಳು, ದಾಖಲೆಗಳು, ಮೊಬೈಲ್, ಸಿಪಿಯು, 11 ಸಿಮ್ ಕಾರ್ಡ್ಗಳು ಸೇರಿದಂತೆ ಎಸ್ಐಪಿ ಟ್ರಂಕ್ ಸರ್ವರ್ ವ್ಯವಸ್ಥೆಯ ಡೇಟಾ ವಸ್ತುಗಳನ್ನು ವಶಪಡಿಸಿಕೊಂಡಿರುವುದಾಗಿ ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ನಕಲಿ ಇಂಡಿಯನ್ ಲೀಗಲ್ ಸರ್ವಿಸ್ ಕಂಪೆನಿಯು 1.50 ಕೋಟಿ ರೂ. ಗಳ ಅಕ್ರಮ ಹಣಕಾಸು ವ್ಯವಹಾರದಲ್ಲಿ ತೊಡಗಿರುವುದು ದೃಢಪಟ್ಟಿದ್ದು, ದೇಶಾದ್ಯಂತ 29ಕ್ಕೂ ಹೆಚ್ಚು ಪ್ರಕರಣಗಳು ಸೈಬರ್ ಕ್ರೈಂ ಪೋರ್ಟಲ್ನಲ್ಲಿ ದಾಖಲಾಗಿವೆ. ಈ ಜಾಲದಲ್ಲಿ ತೊಡಗಿರುವ ಉಳಿದ ಆರೋಪಿಗಳನ್ನು ಪತ್ತೆಹಚ್ಚಲು ತನಿಖೆ ಮುಂದುವರೆದಿದೆ ಎಂದು ಸಿಸಿಬಿ ಪೊಲೀಸರು ವಿವರಿಸಿದ್ದಾರೆ.







