ಸಿಸಿಬಿ ಕಾರ್ಯಾಚರಣೆ | ವಿದೇಶಿ ಪ್ರಜೆ ಸಹಿತ ಇಬ್ಬರ ಬಂಧನ, 2.50ಕೋಟಿ ರೂ. ಮೌಲ್ಯದ ಮಾದಕ ವಸ್ತು ವಶ

ಸಾಂದರ್ಭಿಕ ಚಿತ್ರ | PC : gemini AI
ಬೆಂಗಳೂರು : ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ನಗರಾದ್ಯಂತ ಸಿಸಿಬಿ ಪೊಲೀಸರು ಕಾರ್ಯಾಚರಣೆ ಕೈಗೊಂಡು ವಿದೇಶಿ ಪ್ರಜೆ ಹಾಗೂ ಡೆಲಿವರಿ ಬಾಯ್ನನ್ನು ಬಂಧಿಸಿ 2.50 ಕೋಟಿ ರೂ.ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ವ್ಯವಹಾರಿಕ ವೀಸಾದಡಿ ಭಾರತಕ್ಕೆ ಬಂದಿರುವ ವಿದೇಶಿ ಪ್ರಜೆಯೊಬ್ಬ ಬೆಂಗಳೂರಿನಲ್ಲಿ ವಾಸವಾಗಿದ್ದುಕೊಂಡು ಮಾದಕ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಸೋಲದೇವನಹಳ್ಳಿ ಪೊಲೀಸ್ ಠಾಣಾ ಸರಹದ್ದಿನಲ್ಲಿ ಕಾರ್ಯಾಚರಣೆ ಕೈಗೊಂಡು ವಿದೇಶಿ ಪ್ರಜೆಯನ್ನು ಬಂಧಿಸಿ 2 ಲಕ್ಷ ರೂ. ನಗದು, 1 ಕೆ.ಜಿ. 70 ಗ್ರಾಂ ಎಂಡಿಎಂಎ ಕ್ರಿಸ್ಟಲ್, 60 ಎಕ್ಸ್ ಟೆಸಿಪಿಲ್ಸ್ ಗಳು, 100 ಎಲ್ಎಸ್ಡಿ ಸ್ಟ್ರಿಪ್ಸ್ ಗಳು, 5 ಗ್ರಾಂ ಕೊಕೇನ್, 2 ಮೊಬೈಲ್, 1 ಲ್ಯಾಪ್ಟ್ಯಾಪ್ ವಶಪಡಿಸಿಕೊಂಡಿದ್ದು, ಇವುಗಳ ಒಟ್ಟು ಮೌಲ್ಯ 2.25 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ.
ಈ ವಿದೇಶಿ ಪ್ರಜೆಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ಹೊಸದಿಲ್ಲಿ ಮತ್ತು ಮುಂಬೈನಲ್ಲಿ ವಾಸವಾಗಿರುವ ವಿದೇಶಿ ಪ್ರಜೆಗಳಿಂದ ಕಡಿಮೆ ಬೆಲೆಗೆ ಎಂಡಿಎಂಎ ಖರೀದಿಸಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಪರಿಚಯಸ್ಥ ಗಿರಾಕಿಗಳಿಗೆ ಸರಬರಾಜು ಮಾಡಲು ತಯಾರಿ ನಡೆಸಿದ್ದುದು ಗೊತ್ತಾಗಿದೆ.
ಈತನ ವಿರುದ್ಧ ಈ ಹಿಂದೆಯೂ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಪ್ರಕರಣ ದಾಖಲಾಗಿದ್ದು, ಜೈಲಿನಿಂದ ಬಿಡುಗಡೆಯಾಗಿ ಹೊರ ಬಂದ ನಂತರವೂ ಸಹ ಮತ್ತೆ ಡ್ರಗ್ ಪೆಡ್ಲಿಂಗ್ನಲ್ಲಿ ತೊಡಗಿಕೊಂಡಿರುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಸದ್ಯ ಈತನ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿರುವುದಾಗಿ ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಮತ್ತೊಂಡೆದೆ, ಬಂಡೇಪಾಳ್ಯ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ಕೈಗೊಂಡು ನಗರದಲ್ಲಿ ಡೆಲಿವರಿ ಬಾಯ್ ಕೆಲಸದ ಜೊತೆಗೆ ಮಾದಕ ವಸ್ತು ಮಾರಾಟ ಮಾಡಿ ಅಕ್ರಮ ಹಣ ಸಂಪಾದಿಸುತ್ತಿದ್ದ ತಮಿಳುನಾಡು ಮೂಲದ ಡ್ರಗ್ ಪೆಡ್ಲರ್ನನ್ನು ಬಂಧಿಸಿದ್ದು, ಆತನಿಂದ 25 ಲಕ್ಷ ರೂ. ಮೌಲ್ಯದ 5 ಗ್ರಾಂ ಕೊಕೇನ್ ಹಾಗೂ 100 ಎಲ್ಎಸ್ಡಿ ಸ್ಟ್ರಿಪ್ಸ್ ಗಳು, 1 ಮೊಬೈಲ್ ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ಈ ಆರೋಪಿಯು ತಮಿಳುನಾಡಿನಿಂದ ನಗರಕ್ಕೆ ಬಂದು ಡೆಲಿವರಿ ಬಾಯ್ ಕೆಲಸ ಮಾಡಿಕೊಂಡಿದ್ದು, ಕಡಿಮೆ ಬೆಲೆಗೆ ಮಾದಕ ವಸ್ತುಗಳನ್ನು ಖರೀದಿಸಿ ನಗರದ ಪರಿಚಯಸ್ಥ ಗಿರಾಕಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ಸದ್ಯ ಈತನ ವಿರುದ್ಧ ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಸಿರುವುದಾಗಿ ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ.







