‘ಜನಗಣತಿ’ ದತ್ತಾಂಶ: ಅಜೀಂ ಪ್ರೇಮ್ಜಿ ವಿವಿ ಒಪ್ಪಂದ

Photo: azimpremjiuniversity.edu.in
ಬೆಂಗಳೂರು: ಜನಗಣತಿಯ ದತ್ತಾಂಶಗಳನ್ನು ಆಧರಿಸಿದ ಸಂಶೋಧನೆಗೆ ಅನುಕೂಲವಾಗುವಂತೆ ವಿಶೇಷ ಸಂಶೋಧನಾ ಅಧ್ಯಯನ ಕಾರ್ಯಸ್ಥಳವನ್ನು ಸ್ಥಾಪಿಸಲು ಅಜೀಂ ಪ್ರೇಮ್ಜಿ ವಿವಿ ಮತ್ತು ಡೈರೆಕ್ಟೋರೇಟ್ ಆಫ್ ಸೆನ್ಸಸ್ ಆಪರೇಶನ್ಸ್ ಕರ್ನಾಟಕ(ಕರ್ನಾಟಕ ಜನಗಣತಿ ಕಾರ್ಯಾಚರಣೆಗಳ ನಿರ್ದೇಶನಾಲಯ) ವಿವಿ ಬೆಂಗಳೂರಿನ ಕ್ಯಾಂಪಸ್ನಲ್ಲಿ ಒಪ್ಪಂದಕ್ಕೆ ಸಹಿ ಹಾಕಿವೆ.
ಈ ಸೌಲಭ್ಯವು ಅಜೀಂ ಪ್ರೇಮ್ಜಿ ವಿವಿಯ ಎಲ್ಲ ಸದಸ್ಯರು ಹಾಗೂ ವಿದ್ಯಾರ್ಥಿಗಳಿಗೆ ಮುಕ್ತವಾಗಿದ್ದು, ಇತರ ಆಸಕ್ತ ಸಂಶೋಧಕರೂ ತಮ್ಮ ಶೈಕ್ಷಣಿಕ ಉದ್ದೇಶಗಳಿಗಾಗಿ ಇದನ್ನು ಬಳಸಿಕೊಳ್ಳಲು ಅನುಮತಿ ನೀಡಲಾಗಿದೆ. ದೇಶದಲ್ಲಿ ನಡೆಸಲಾಗುವ ಜನಗಣತಿಗೆ ಸುಮಾರು 130 ವರ್ಷಗಳ ಇತಿಹಾಸವಿದ್ದು, ಇದರಲ್ಲಿ ಜನಸಂಖ್ಯೆಗೆ ಸಂಬಂಧಿಸಿದಂತೆ ವಿವಿಧ ಸೂಚ್ಯಂಕಗಳಿಗೆ ಅನುಗುಣವಾಗಿ ಅಂಕಿ-ಅಂಶಗಳನ್ನು ಸಂಗ್ರಹಿಸಿ ಮಾಹಿತಿಯನ್ನು ನೀಡಲಾಗುವ ದತ್ತಾಂಶದ ಏಕೈಕ ಮೂಲ ಎಂದೇ ಪರಿಗಣಿಸಲಾಗುತ್ತದೆ. ಜನಗಣತಿಯ ಅಂಕಿ-ಅಂಶಗಳು ವಿವಿಧ ನಿಕಾಯಗಳ ವಿದ್ವಾಂಸರು ಮತ್ತು ಸಂಶೋಧಕರಿಗೆ ದತ್ತಾಂಶದ ಪ್ರಮುಖ ಮೂಲವಾಗಿದೆ.
ರಿಜಿಸ್ಟ್ರಾರ್ ಜನರಲ್ ಕಚೇರಿ ಮತ್ತು ಸೆನ್ಸಸ್ ಕಮಿಷನರ್ ಇಂಡಿಯಾ (ಭಾರತದ ಜನಗಣತಿ ಆಯುಕ್ತರ ಕಚೇರಿ) ಪ್ರತಿ 10 ವರ್ಷಗಳಿಗೊಮ್ಮೆ ಜನಗಣತಿಯನ್ನು ನಡೆಸುತ್ತದೆ. ಸಂಗ್ರಹಿಸಲಾದ ಒಟ್ಟು ಮಾಹಿತಿ ಕೋಷ್ಟಕಗಳ ರೂಪದಲ್ಲಿ ಪ್ರಸ್ತುತ ಪಡಿಸಿ, ತನ್ನ ರಾಜ್ಯ ಕಚೇರಿಗಳಾದ ಡೈರೆಕ್ಟೋರೇಟ್ ಆಫ್ ಸೆನ್ಸ್ಸೆಸ್ ಆಪರೇಶನ್ಸ್ ಮೂಲಕ ದತ್ತಾಂಶವನ್ನು ಎಲ್ಲ ಕಡೆ ಹಂಚಿಕೊಳ್ಳುತ್ತದೆ.
10 ವರ್ಷಗಳಿಗೊಮ್ಮೆ ನಡೆಯುವ ಜನಗಣತಿಯಲ್ಲಿ ಸಾಮಾಜಿಕ, ಜನಸಂಖ್ಯಾ ರಚನೆ, ಆರ್ಥಿಕ ಮತ್ತು ಇತರೆ ಸಂಬಂಧಿತ ಅಂಶಗಳನ್ನು ಒಳಗೊಂಡಂತೆ ಹಲವಾರು ವಿಷಯಗಳ ಕುರಿತ ದತ್ತಾಂಶವನ್ನು ಸಂಗ್ರಹಿಸಲಾಗುತ್ತದೆ. ಇದರೊಂದಿಗೆ ಈ ಗಣತಿಯು ವಿವಿಧ ಸಾಮಾಜಿಕ ಮತ್ತು ಆರ್ಥಿಕ ಸೂಚ್ಯಂಕಗಳ ಕುರಿತಂತೆ ಸಾಕಷ್ಟು ಮಾಹಿತಿಯನ್ನು ನೀಡುತ್ತದೆ. ಈ ಒಪ್ಪಂದಕ್ಕೆ ಡೈರೆಕ್ಟೋರೇಟ್ ಆಫ್ ಸೆನ್ಸಸ್ ಆಪರೇಶನ್ಸ್ ಕರ್ನಾಟಕದ ನಿರ್ದೇಶಕ ವಿಜಯ್ ಕುಮಾರ್ ಎಸ್.ಬಿ. ಮತ್ತು ಅಜೀಂ ಪ್ರೇಮ್ಜಿ ವಿವಿಯ ಉಪಕುಲಪತಿ ಪ್ರಸಾದ್ ಸಹಿ ಹಾಕಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
.







