ಕೇಂದ್ರ ಸರಕಾರದಿಂದ ಕರ್ನಾಟಕಕ್ಕೆ ಬರಬೇಕಾದ 2 ಲಕ್ಷ ಕೋಟಿ ರೂ. ಗೆ ಕನ್ನ: ಸುರ್ಜೆವಾಲಾ

ಬೆಂಗಳೂರು, ಎ.5: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮತ್ತು ಬಿಜೆಪಿಯ ಕನ್ನಡಿಗ ವಿರೋಧಿ ಸೇಡಿನ ರಾಜಕಾರಣ ಬಯಲಾಗಿದ್ದು, ಕೇಂದ್ರದಿಂದ ಕರ್ನಾಟಕಕ್ಕೆ ಬರಬೇಕಾದ ಸುಮಾರು ಎರಡು ಲಕ್ಷ ಕೋಟಿ ರೂ.ಗಳಿಗೆ ಕನ್ನ ಹಾಕಲಾಗಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಆರೋಪಿಸಿದ್ದಾರೆ.
ರವಿವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯ ಷಡ್ಯಂತ್ರ ಮತ್ತು ಕನ್ನಡಿಗ ವಿರೋಧಿ ಧೋರಣೆ ಈಗ ಸಂಪೂರ್ಣವಾಗಿ ಬಯಲಾಗಿದೆ. ಮೋದಿ ಸರಕಾರ ಮತ್ತು ಬಿಜೆಪಿ ವ್ಯವಸ್ಥಿತವಾಗಿ 6.5 ಕೋಟಿ ಕನ್ನಡಿಗರನ್ನು ಶಿಕ್ಷಿಸುತ್ತಿದೆ. ತೆರಿಗೆ ಮತ್ತು ಅನುದಾನದಲ್ಲಿ ಕರ್ನಾಟಕದ ನ್ಯಾಯಸಮ್ಮತ ಪಾಲನ್ನು ನಿರಾಕರಿಸುತ್ತಿದೆ ಎಂದು ಕಿಡಿಗಾರಿದರು.
ಕೃಷಿ, ನೀರಾವರಿ, ರಕ್ಷಣೆ ಮತ್ತು ಮೂಲಸೌಕರ್ಯ ಯೋಜನೆಗಳಿಗೆ ಅಡ್ಡಿಪಡಿಸುತ್ತಿದೆ. ಅಲ್ಲದೆ, 5 ಕೋಟಿಗೂ ಹೆಚ್ಚು ಕನ್ನಡಿಗರನ್ನು ತಲುಪಿರುವ ನಮ್ಮ ಐದು ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ದ್ವೇಷ ಸಾಧಿಸುವ ಮೂಲಕ ಬಿಜೆಪಿ ತನ್ನ ವಿರೋಧಿ ನೀತಿಯನ್ನು ಪ್ರದರ್ಶಿಸುತ್ತಿದೆ. ಬಿಜೆಪಿ ಕರ್ನಾಟಕಕ್ಕೆ ಹಾನಿಕಾರಕ ಎಂಬ ಕಟು ಸತ್ಯಕ್ಕೆ ಬಿಜೆಪಿಯ ಕೇಂದ್ರ ಸಚಿವರು, ಸಂಸದರು, ಶಾಸಕರು ಮತ್ತು ಪ್ರತಿಯೊಬ್ಬ ನಾಯಕರು ಉತ್ತರಿಸಬೇಕಿದೆ ಎಂದು ಸುರ್ಜೆವಾಲಾ ಆಗ್ರಹಿಸಿದರು.
1,97,257 ಕೋಟಿ ರೂ.ಮೊತ್ತದ ತೆರಿಗೆ ಮತ್ತು ಅನುದಾನದ ಪಾಲು ನಿರಾಕರಣೆ:
14ನೇ ಮತ್ತು 15ನೇ ಹಣಕಾಸು ಆಯೋಗದಲ್ಲಿ ಕರ್ನಾಟಕಕ್ಕೆ ಬರಬೇಕಿದ್ದ 79770 ಕೋಟಿ ರೂ. ನೀಡಿಲ್ಲ, ಅವೈಜ್ಞಾನಿಕ ಜಿಎಸ್ಟಿ ಜಾರಿಯಿಂದ ಕರ್ನಾಟಕಕ್ಕೆ ಆಗಿರುವ ನಷ್ಟ 59274 ಕೋಟಿ ರೂ., ಹೊಸ ಜಿಎಸ್ಟಿ ಪರಿಷ್ಕರಣೆಯಿಂದ ಕರ್ನಾಟಕಕ್ಕೆ ಆಗಿರುವ ನೇರ ನಷ್ಟ 9 ಸಾವಿರ ಕೋಟಿ ರೂ. ಎಂದು ಅವರು ತಿಳಿಸಿದರು.
ಜಲಜೀವನ್ ಮಿಷನ್ ಅಡಿಯಲ್ಲಿ 10,889 ಕೋಟಿ ರೂ. ಬಿಡುಗಡೆ ಮಾಡಿಲ್ಲ. ಬೆಂಗಳೂರಿನ ಪೆರಿಫೆರಲ್ ರಿಂಗ್ ರೋಡ್ ಮತ್ತು ನಗರ ಸಂಸ್ಥೆಗಳಿಗೆ ನೀಡಬೇಕಾದ 11,495 ವಿಶೇಷ ಅನುದಾನ ನೀಡಿಲ್ಲ, ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಬಜೆಟ್ನಲ್ಲಿ ಘೋಷಿಸಿದ್ದ 5,300 ಕೋಟಿ ರೂ.ಬಿಡುಗಡೆ ಮಾಡಿಲ್ಲ ಎಂದು ಸುರ್ಜೆವಾಲಾ ಹೇಳಿದರು.
ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ 4195 ಕೋಟಿ ರೂ. ನೀಡಿಲ್ಲ, 2023ರ ಬರ ಪರಿಹಾರದಲ್ಲಿ (ಬೇಡಿಕೆ 18172 ಕೋಟಿ ರೂ.ಗಳು, ನೀಡಿದ್ದು ಕೇವಲ 3454 ಕೋಟಿ ರೂ.) 15718 ಕೋಟಿ ರೂ.ಗಳನ್ನು ನೀಡಿಲ್ಲ. 2025ರ ಪ್ರವಾಹ ಪರಿಹಾರದಲ್ಲಿ (ಬೇಡಿಕೆ 2 ಸಾವಿರ ಕೋಟಿ ರೂ., ನೀಡಿದ್ದು ಕೇವಲ 384 ಕೋಟಿ ರೂ.) 1616 ಕೋಟಿ ರೂ.ಗಳನ್ನು ನೀಡಿಲ್ಲ ಎಂದು ಅವರು ಮಾಹಿತಿ ನೀಡಿದರು.
ಒಟ್ಟಾರೆಯಾಗಿ, ಬಿಜೆಪಿಯ ಅನ್ಯಾಯದಿಂದ ಕರ್ನಾಟಕದ ಜನತೆಗೆ ಆಗಿರುವ ನೇರ ನಷ್ಟ 197257 ಕೋಟಿ ರೂ.ಗಳು. ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆಯಲ್ಲಿ ಮತ ಕೇಳುವ ಮೊದಲು ಬಿಜೆಪಿ ನಾಯಕರು ಇದಕ್ಕೆ ಉತ್ತರಿಸುವರೇ? ಎಂದು ಸುರ್ಜೆವಾಲಾ ಆಗ್ರಹಿಸಿದರು.
ಆಂಧ್ರದ ಬಿಜೆಪಿ-ಟಿಡಿಪಿ ಸರಕಾರ ಭದ್ರ ಮೇಲ್ದಂಡೆ ಯೋಜನೆಯನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದೆ, ಆದರೆ ಕರ್ನಾಟಕದ ಬಿಜೆಪಿ ನಾಯಕರು ಮೌನವಾಗಿದ್ದಾರೆ. ಮಹಾದಾಯಿ (ಕಳಸಾ ಬಂಡೂರಿ) ಯೋಜನೆಗೆ ಸುಪ್ರೀಂ ಕೋರ್ಟ್ ಅನುಮೋದನೆ ನೀಡಿ, ರಾಜ್ಯ ಸರಕಾರ ಟೆಂಡರ್ ಪ್ರಕ್ರಿಯೆ ಮುಗಿಸಿದರೂ, ಕೇಂದ್ರ ಸರಕಾರ ವನ್ಯಜೀವಿ ಮತ್ತು ಅರಣ್ಯ ಇಲಾಖೆಯ ಅನುಮತಿಗಳನ್ನು ನೀಡದೆ ತಡೆಹಿಡಿದಿದೆ ಎಂದು ಅವರು ಆರೋಪಿಸಿದರು.
ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ನೀರುಣಿಸುವ ಎತ್ತಿನಹೊಳೆ ಯೋಜನೆಗೆ 423 ಎಕರೆ ಅರಣ್ಯ ಭೂಮಿ ಮಂಜೂರು ಮಾಡದೆ ಕೇಂದ್ರ ಸರಕಾರ ವಿಳಂಬ ಮಾಡುತ್ತಿದೆ. ಕೃಷ್ಣಾ ಮೇಲ್ದಂಡೆ ಯೋಜನೆ-3ಕ್ಕೆ ಸಂಬಂಧಿಸಿದಂತೆ 11 ವರ್ಷಗಳಿಂದ ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣದ ತೀರ್ಪನ್ನು ಗೆಜೆಟ್ನಲ್ಲಿ ಅಧಿಸೂಚನೆ ಹೊರಡಿಸಲು ಮೋದಿ ಸರಕಾರ ನಿರಾಕರಿಸುತ್ತಿದೆ. ಇದರಿಂದ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಅನ್ಯಾಯವಾಗುತ್ತಿದೆ ಎಂದು ಸುರ್ಜೆವಾಲಾ ಹೇಳಿದರು.
ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 524.26 ಮೀಟರ್ಗೆ ಏರಿಸುವ ಪ್ರಯತ್ನಕ್ಕೆ ನೆರೆ ರಾಜ್ಯಗಳ ಬಿಜೆಪಿ ಸರಕಾರಗಳು ಅಡ್ಡಿಪಡಿಸುತ್ತಿವೆ. ಮೇಕೆದಾಟು ಯೋಜನೆಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ ನೀಡಿದ್ದರೂ, ಕೇಂದ್ರ ಸರಕಾರ ಅರಣ್ಯ ಭೂಮಿ ಮುಳುಗಡೆಗೆ ಅನುಮತಿ ನೀಡದೆ ಕುಡಿಯುವ ನೀರಿನ ಯೋಜನೆಗೆ ಅಡ್ಡಿಪಡಿಸುತ್ತಿದೆ ಎಂದು ಅವರು ತಿಳಿಸಿದರು.
ಭಾರತದ ಶೇ.67 ರಷ್ಟು ಏರೋಸ್ಪೇಸ್ ಮತ್ತು ರಕ್ಷಣಾ ಉತ್ಪಾದನೆ ಕರ್ನಾಟಕದಲ್ಲಿದ್ದರೂ, ರಾಜ್ಯಕ್ಕೆ ರಕ್ಷಣಾ ಕಾರಿಡಾರ್ ನಿರಾಕರಿಸಲಾಗಿದೆ. ಮಂಗಳೂರಿನಲ್ಲಿ ಸ್ಥಾಪಿಸಬೇಕಿದ್ದ ಪ್ಲಾಸ್ಟಿಕ್ ಪಾರ್ಕ್ ಯೋಜನೆಯ ಡಿಪಿಆರ್ಗೆ ಕೇಂದ್ರ ಸರಕಾರ ಅನುಮೋದನೆ ನೀಡುತ್ತಿಲ್ಲ ಎಂದು ಸುರ್ಜೆವಾಲಾ ಕಿಡಿಗಾರಿದರು.
ಮೋದಿ ಸರಕಾರದ ಅನ್ಯಾಯದ ವಿರುದ್ಧ ಮೌನವಾಗಿರುವ ಬಿಜೆಪಿ ನಾಯಕರು, ರಾಜ್ಯದ 5.5. ಕೋಟಿ ಕನ್ನಡಿಗರಿಗೆ 1.31 ಲಕ್ಷ ಕೋಟಿ ರೂ. ತಲುಪಿಸಿರುವ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ ಮತ್ತು ಯುವನಿಧಿ ಗ್ಯಾರಂಟಿಗಳನ್ನು ವಿರೋಧಿಸುತ್ತಿದ್ದಾರೆ. ಕನ್ನಡಿಗರ ಹಕ್ಕು ಮತ್ತು ಹಿತಾಸಕ್ತಿಗಳ ವಿಷಯದಲ್ಲಿ ಮೋದಿ ಸರಕಾರದ ತಾರತಮ್ಯದ ಧೋರಣೆಯನ್ನು ಪ್ರಶ್ನಿಸದ ರಾಜ್ಯ ಬಿಜೆಪಿ ನಾಯಕರಿಗೆ ಶಿಕ್ಷೆಯಾಗಲೇಬೇಕು. ಬಿಜೆಪಿ ಕರ್ನಾಟಕಕ್ಕೆ ದ್ರೋಹ ಮಾಡಿದೆ, ಅವರಿಗೆ ನಮ್ಮ ಮತ ಪಡೆಯುವ ಹಕ್ಕಿಲ್ಲ ಎಂದು ಸುರ್ಜೆವಾಲ ಹೇಳಿದರು.







