ಸಿಇಟಿ: ಅರ್ಹತಾ ಪರೀಕ್ಷೆಯ ಅಂಕ ದಾಖಲಿಸಲು ಸೂಚನೆ

ಬೆಂಗಳೂರು : ಯುಜಿಸಿಇಟಿ ಸಂಬಂಧ ಅರ್ಹತಾ ಪರೀಕ್ಷೆಯ ಅಂಕಗಳನ್ನು ಅಪ್ ಲೋಡ್ ಮಾಡದ ಕೆಲ ಅಭ್ಯರ್ಥಿಗಳ ರ್ಯಾಂಕ್ ಪ್ರಕಟಣೆ ಆಗಿರುವುದಿಲ್ಲ. ಅಂತಹವರು ಕೂಡಲೇ ಕೆಇಎ ವೆಬ್‍ಸೈಟ್‍ನಲ್ಲಿ ಬಿಟ್ಟಿರುವ ಲಿಂಕ್ ಮೂಲಕ ತಮ್ಮ ಅಂಕಗಳನ್ನು ಅಪ್‍ಲೋಡ್ ಮಾಡಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ಅಂಕಗಳನ್ನು ದಾಖಲಿಸಿ, ಅಂಕ ಪಟ್ಟಿ ಅಪ್‍ಲೋಡ್ ಮಾಡಿದ ನಂತರ ಅದರ ಆಧಾರದ ಮೇಲೆ ಐದು ದಿನಗಳ ಒಳಗೆ ಸ್ಪಾಟ್ ರ್ಯಾಂಕ್ ನೀಡಲಾಗುವುದು. ಈ ವಿಷಯದಲ್ಲಿ ಯಾವುದೇ ರೀತಿಯಲ್ಲಿ ಗಾಬರಿಯಾಗುವ ಅಗತ್ಯ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸಿಬಿಎಸ್‍ಇ, ಐಸಿಎಸ್‍ಇ ಹಾಗೂ ಇತರ ರಾಜ್ಯಗಳ ಕೆಲ ಅಭ್ಯರ್ಥಿಗಳ ಅಂಕಗಳು ಆನ್‍ಲೈನ್‍ನಲ್ಲಿ ಕೆಇಎಗೆ ಲಭ್ಯವಾಗದ ಕಾರಣ, ಖುದ್ದು ಲಿಂಕ್ ಮೂಲಕ ದಾಖಲಿಸಲು ಹಲವು ಬಾರಿ ಅಂತಹವರಿಗೆ ಸೂಚಿಸಲಾಗಿತ್ತು. ಆದರೂ ಕೆಲವರು ಅಂಕ ಹಾಗೂ ಅಂಕಪಟ್ಟಿಯನ್ನು ಅಪ್‍ಲೋಡ್ ಮಾಡಿಲ್ಲ ಎಂದು ಅವರು ತಿಳಿಸಿದ್ದಾರೆ.
ಅಂಕ ದಾಖಲಿಸಲು https://share.google/Hlty7RzxyF0vLf0qy ಲಿಂಕ್‍ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






